ಶಿವಮೊಗ್ಗ: ರಾಜ್ಯದ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗಕ್ಕೆ ಯುದ್ಧ ಟ್ಯಾಂಕರನ್ನು ತರಲಾಗಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧದಲ್ಲಿ ಬಳಸಲಾದ ಟ್ಯಾಂಕರ್ ಇದಾಗಿದ್ದು, ಇಂದು ಅದ್ಧೂರಿ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು, ಈ ಟ್ಯಾಂಕರ್ ಅನ್ನು ಶಿವಮೊಗ್ಗದ ಪ್ರತಿಷ್ಠಿತ ವೃತ್ತದಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.
ಮಹಾರಾಷ್ಟ್ರದ ಪುಣೆಯಿಂದ ಶಿವಮೊಗ್ಗಕ್ಕೆ ತಂದ ಯುದ್ಧ ಟ್ಯಾಂಕರ್‌ಗೆ ಶಿವಮೊಗ್ಗದ ರಾಯಣ್ಣ ಸರ್ಕಲ್‌ನಿಂದ ಎಂಆರ್‌ಎಸ್ ಸರ್ಕಲ್‌ವರೆಗೂ ಬೈಕ್ ರ‍್ಯಾಲಿ ಮೂಲಕ ಮೆರವಣಿಗೆ ಮಾಡಲಾಯಿತು. ಯುದ್ಧ ಟ್ಯಾಂಕರ್ ಮೆರವಣಿಗೆಗೆ ಮಹಿಳಾ ತಂಡದ ಡೊಳ್ಳು ಹಾಗೂ ಚಂಡೆ ವಾದ್ಯಗಳು ಮೆರಗು ನೀಡಿದವು. ಮಾಜಿ ಸೈನಿಕರು ತ್ರಿವರ್ಣ ಧ್ವಜ ಹಿಡಿದು ಬೈಕ್‌ನಲ್ಲಿ ಬಂದಿದ್ದು ಕೂಡ ವಿಶೇಷವಾಗಿತ್ತು.
ಈ ವೇಳೆ ಶಾಸಕ ಚನ್ನ ಬಸಪ್ಪ, ಮೇಯರ್ ಶಿವಕುಮಾರ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ಮಾಜಿ ಸೈನಿಕ ಸಂಘದ ಸುಬೇದಾರ್ ಮೇಜರ್ ಉದಯ್ ರಿಂದ ಪುಷ್ಪ ಹೂಗುಚ್ಚ ಸುರಿಸಿ ಸ್ವಾಗತ ಮಾಡಿದರು.
ಎಂಆರ್‌ಎಸ್‌ನಲ್ಲಿ ಯುದ್ಧ ಟ್ಯಾಂಕರ್ ಸ್ಥಾಪನೆ!
ಯುದ್ಧ ಟ್ಯಾಂಕರ್ ಅನ್ನು ಎಂಆರ್‌ಎಸ್ ವೃತ್ತದ ಬಳಿ ಸ್ಥಾಪಿಸಲಾಗುವುದು. ಸದ್ಯಕ್ಕೆ ಮೆಸ್ಕಾಂ ಮೈದಾನದಲ್ಲಿ ಟ್ಯಾಂಕರ್ ಅನ್ನು ಇರಿಸಲಾಗಿದೆ. ಇನ್ನು ಮುಂದೆ ಯುದ್ಧದ ಸಂದರ್ಭದಲ್ಲಿ ಬಳಕೆಯಾಗಿದ್ದ ಟ್ಯಾಂಕರ್ ಅನ್ನು ಶಿವಮೊಗ್ಗ ಜನರು ಪ್ರತಿ ದಿನ ಕಣ್ತುಂಬಿಕೊಳ್ಳಬಹುದು.
ರಷ್ಯಾ ನಿರ್ಮಿತ ಟಿ55 ಹೆಸರಿನ ಟ್ಯಾಂಕರ್ ಇದಾಗಿದ್ದು, ಶಿವಮೊಗ್ಗಕ್ಕೆ ತರಲು ಸಂಸದ ಬಿವೈ ರಾಘವೇಂದ್ರ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದರು. ಅವರ ಮನವಿಗೆ ಸ್ಪಂದಿಸಿದ ರಕ್ಷಣಾ ಇಲಾಖೆ, ಟ್ಯಾಂಕರ್ ಅನ್ನು ಕಳುಹಿಸಿಕೊಟ್ಟಿದೆ. ಇದರ ಜೊತೆಗೆ ಮುಂದಿನ ದಿನಗಳಲ್ಲಿ ಯುದ್ಧ ವಿಮಾನವೂ ಬರಲಿದ್ದು ಅದನ್ನು ಸಹ ನಗರದಲ್ಲಿ ಪ್ರತಿಷ್ಠಾಪಿಸಲಾಗುವುದು ಎಂದು ತಿಳಿದು ಬಂದಿದೆ.
ಇದೆ ವೇಳೆ ಶಾಸಕ ಎಸ್‌ಎನ್ ಚೆನ್ನಬಸಪ್ಪ ಮಾತನಾಡಿ, ಐತಿಹಾಸಿಕ ಯುದ್ಧ ಗೆದ್ದ ಟ್ಯಾಂಕರ್ ನಮಗೆ ಸಿಕ್ಕಿರುವುದು ಹೆಮ್ಮೆಯ ಸಂಗತಿ. ನಮ್ಮ ಸೈನಿಕ ಸಂಘ ಸಂಸದ ಬಿವೈ ರಾಘವೇಂದ್ರ ಅವರಿಗೆ ವಿನಂತಿ ಮಾಡಿ ಡಿಕಮಿಷನ್ ಆಗಿರೋ ಟ್ಯಾಂಕರ್ ಅನ್ನು ಪಡೆಯಲು ರಕ್ಷಣಾ ಸಚಿವಾಲಯಕ್ಕೆ ಮನವಿ ಮಾಡಲು ಹೇಳಿದ್ದರು. ರಾಘವೇಂದ್ರ ಅವರು 2020ರಲ್ಲಿ ಪತ್ರ ಬರೆದು ಯುದ್ಧ ಟ್ಯಾಂಕರ್ ಹಾಗೂ ಯುದ್ಧ ವಿಮಾನ ಎರಡನ್ನೂ ಶಿವಮೊಗ್ಗಕ್ಕೆ ಕಳಿಸಿಕೊಡಬೇಕು ಎಂದು ಕೋರಿದ್ದರು ಎಂದರು.
Comments