top of page

ಮಹತ್ವಾಕಾಂಕ್ಷಿಯ ಚಂದ್ರಯಾನ-3 ಉಡಾವಣೆಗೆ ಸಜ್ಜು: ಮಾಡೆಲ್ ಜೊತೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಇಸ್ರೋ ವಿಜ್ಞಾನಿಗಳ

  • Writer: vishwa patha
    vishwa patha
  • Jul 13, 2023
  • 1 min read

ತಿರುಪತಿ: ಇಸ್ರೋದ ಮಹತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನವು ತನ್ನ ಮೂರನೇ ದಂಡಯಾತ್ರೆಯಲ್ಲಿ ಚಂದ್ರನ ಕಡೆಗೆ ಹಾರಲು ಸಿದ್ಧವಾಗಿದ್ದು, ಈ ಮಧ್ಯೆ ಚಂದ್ರಯಾನ-3 ಉಪಗ್ರಹ ನೌಕೆಯ ಮಾಡೆಲ್ ಜೊತೆ ಇಸ್ರೋ ವಿಜ್ಞಾನಿಗಳು ಹಾಗೂ ಸಿಬ್ಬಂದಿಗಳ ತಂಡ ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೆ ಭೇಟಿ ನೀಡಿದ್ದು, ವಿಶೇಷ ಪೂಜೆ ಸಲ್ಲಿಸಿದೆ.ಆಂಧ್ರಪ್ರದೇಶದ ತಿರುಪತಿಯಲ್ಲಿರುವ ಬಾಲಾಜಿಯ ದೇಗುಲಕ್ಕೆ ಆಗಮಿಸಿದ ಇಸ್ರೋ ವಿಜ್ಞಾನಿಗಳ ತಂಡ ಮಿನಿಯೇಚರ್ ಮಾಡೆಲ್ ಜೊತೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದರು.



ಇಸ್ರೋದ ಮಹತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನ-3 ಯೋಜನೆಗೆ 1 ದಿನವಷ್ಟೇ ಬಾಕಿ ಇದ್ದು, 25 ಗಂಟೆ 30 ನಿಮಿಷಗಳ ಕೌಂಟ್‌ಡೌನ್‌ ಇಂದು ಮಧ್ಯಾಹ್ನ 1 ಗಂಟೆಗೆ ಆರಂಭವಾಗಲಿದೆ. ಇದಕ್ಕೆ ಸಂಬಂಧಿಸಿದಂತೆ ಬುಧವಾರ ಸಿದ್ಧತಾ ಪರಿಶೀಲನೆಯನ್ನು ಇಸ್ರೋ ಮುಗಿಸಿದ್ದು, ಉಡ್ಡಯನಕ್ಕೆ ಅನುಮತಿ ನೀಡಿದೆ.


ಶುಕ್ರವಾರ ಮಧ್ಯಾಹ್ನ 2 ಗಂಟೆ 35 ನಿಮಿಷ 17 ಸೆಕೆಂಡ್‌ಗೆ ಚಂದ್ರಯಾನ ನೌಕೆಯನ್ನು ಹೊತ್ತ ರಾಕೆಟ್‌ ಶ್ರೀಹರಿಕೋಟಾದಿಂದ ಉಡಾವಣೆಗೊಳ್ಳಲಿದೆ. ಈ ಉಡಾವಣೆಗೆ ದೇಶೀಯವಾಗಿ ನಿರ್ಮಾಣ ಮಾಡಲಾದ ಲಾಂಚಿಂಗ್‌ ವಾಹನ ಬಳಸಲಾಗುತ್ತಿದ್ದು, ಲ್ಯಾಂಡರ್‌ ಮತ್ತು ರೋವರ್‌ಗಳನ್ನು ಸಹ ದೇಶೀಯವಾಗಿ ತಯಾರಿಸಲಾಗಿದೆ. ಲ್ಯಾಂಡರ್‌ ಆಗಸ್ಟ್‌ನಲ್ಲಿ ಚಂದ್ರನ ಮೇಲೆ ಇಳಿಯಲಿದೆ. ಈ ಉಡಾವಣೆಯನ್ನು ಇಸ್ರೋದ ಅಧಿಕೃತ ಯೂಟ್ಯೂಬ್‌ ಚಾನಲ್‌ನಲ್ಲಿ ವೀಕ್ಷಿಸಬಹುದು ಎಂದು ಇಸ್ರೋ ಹೇಳಿದೆ.


ಇದು ಚಂದ್ರಯಾನ-2 ಯೋಜನೆಯ ಮುಂದುವರೆದ ಭಾಗವಾದ ಕಾರಣ ಈ ಯೋಜನೆಯ ಆರ್ಬಿಟರನ್ನು ಕೈಬಿಡಲಾಗಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಇಳಿಸಲು ಇಸ್ರೋ ಸಿದ್ಧತೆ ನಡೆಸಿದ್ದು, ಈ ಬಾರಿ ಸಕಲ ಪೂರ್ವ ತಯಾರಿಯೊಂದಿಗೆ ನೌಕೆಯನ್ನು ಸಿದ್ಧಪಡಿಸಲಾಗಿದೆ.

Comments


bottom of page