top of page
Writer's picturevishwa patha

ಬೌಲ್ಡ್ ಮಾಡಿ ದಾಖಲೆ ನಿರ್ಮಿಸಿದ ಅಶ್ವಿನ್

India vs West Indies: ಡೊಮಿನಿಕಾದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಬೌಲರ್​ಗಳು ಭರ್ಜರಿ ಪ್ರದರ್ಶನ ನೀಡಿದ್ದಾರೆ. ಅದರಲ್ಲೂ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 5 ವಿಕೆಟ್ ಕಬಳಿಸಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಇನಿಂಗ್ಸ್​ ಆರಂಭಿಸಿದ ವೆಸ್ಟ್ ಇಂಡೀಸ್​ಗೆ ಅಶ್ವಿನ್ ಮೊದಲ ಆಘಾತ ನೀಡಿದ್ದರು.

ವೆಸ್ಟ್ ಇಂಡೀಸ್ ತಂಡವು 31 ರನ್​ಗಳಿಸಿದ್ದ ವೇಳೆ ಅಶ್ವಿನ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿ ತೇಜ್​ನರೈನ್ ಚಂದ್ರಪಾಲ್ ಔಟಾಗಿದ್ದರು. ಈ ಮೂಲಕ ಶಿವನರೈನ್ ಚಂದ್ರಪಾಲ್ (ತಂದೆ) ಹಾಗೂ ತೇಜ್​ನರೈನ್ ಚಂದ್ರಪಾಲ್​ರನ್ನು (ಮಗ) ಔಟ್ ಮಾಡಿದ ವಿಶೇಷ ದಾಖಲೆಯೊಂದನ್ನು ಅಶ್ವಿನ್ ಬರೆದರು.



ಆ ಬಳಿಕ ಕ್ರೈಗ್ ಬ್ರಾಥ್​ವೇಟ್ ಹಾಗೂ ಅಲಿಕ್ ಅಥನಾಝ್ ವಿಕೆಟ್ ಪಡೆದ ಅಶ್ವಿನ್ ಟೀಮ್ ಇಂಡಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 700 ವಿಕೆಟ್​ಗಳನ್ನು ಪೂರೈಸಿದರು. ಅಲ್ಲದೆ ಈ ಸಾಧನೆ ಮಾಡಿದ ಭಾರತದ ಮೂರನೇ ಬೌಲರ್​ ಎನಿಸಿಕೊಂಡರು.ಇದರ ಬೆನ್ನಲ್ಲೇ ಅಲ್ಝಾರಿ ಜೋಸೆಫ್ ಹಾಗೂ ವಾರಿಕನ್​ರನ್ನು ಔಟ್​ ಮಾಡಿ 5 ವಿಕೆಟ್​ಗಳ ಸಾಧನೆ ಮಾಡಿದರು. ವಿಶೇಷ ಎಂದರೆ ಈ 5 ವಿಕೆಟ್​ಗಳೊಂದಿಗೆ ಪ್ರಸ್ತುತ ಟೆಸ್ಟ್ ಆಡುತ್ತಿರುವ ಆಟಗಾರರಲ್ಲಿ ಅತೀ ಹೆಚ್ಚು 5 ವಿಕೆಟ್ ಪಡೆದ ಬೌಲರ್​ಗಳ ಪಟ್ಟಿಯಲ್ಲಿ ಅಶ್ವಿನ್ ಅಗ್ರಸ್ಥಾನಕ್ಕೇರಿದ್ದಾರೆ. ಇದಕ್ಕೂ ಮುನ್ನ 32 ಬಾರಿ 5 ವಿಕೆಟ್ ಕಬಳಿಸಿದ್ದ ಇಂಗ್ಲೆಂಡ್​ನ ಜೇಮ್ಸ್ ಅ್ಯಂಡರ್ಸ್​ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರು. ಇದೀಗ 33ನೇ ಬಾರಿ ಈ ಸಾಧನೆ ಮಾಡಿರುವ ಅಶ್ವಿನ್ ಈ ಪಟ್ಟಿಯಲ್ಲಿ ಅಗ್ರಸ್ಥಾನವವನ್ನು ಅಲಂಕರಿಸಿದ್ದಾರೆ.


ಬೌಲ್ಡ್ ಮಾಡಿಯೇ ದಾಖಲೆ ಬರೆದ ಅಶ್ವಿನ್


ಈ ಪಂದ್ಯದಲ್ಲಿ ತೇಜ್​ನರೈನ್ ಚಂದ್ರಪಾಲ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಅಶ್ವಿನ್ ಟೆಸ್ಟ್ ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾ ಅತ್ಯಧಿಕ ಬೌಲ್ಡ್ ಮಾಡಿದ ಬೌಲರ್​ ಎನಿಸಿಕೊಂಡರು. ಈ ಹಿಂದೆ ಈ ದಾಖಲೆ ಅನಿಲ್ ಕುಂಬ್ಳೆ ಹೆಸರಿನಲ್ಲಿತ್ತು. ಅನಿಲ್ ಕುಂಬ್ಳೆ ಟೆಸ್ಟ್ ಕ್ರಿಕೆಟ್​ನಲ್ಲಿ ಒಟ್ಟು 94 ಬಾರಿ ಬ್ಯಾಟ್ಸ್​ಮನ್ ಅನ್ನು ಬೌಲ್ಡ್ ಮಾಡಿದ್ದರು. ಇದೀಗ ರವಿಚಂದ್ರನ್ ಅಶ್ವಿನ್ 95ನೇ ಬಾರಿಗೆ ಬೌಲ್ಡ್ ಮಾಡಿ ವಿಕೆಟ್ ಪಡೆದಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್​ನಲ್ಲಿ ಅತೀ ಹೆಚ್ಚು ಬಾರಿ ಬೌಲ್ಡ್ ಮಾಡಿ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.


ವೆಸ್ಟ್ ಇಂಡೀಸ್ ಆಲೌಟ್


ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡವು ರವಿಚಂದ್ರನ್ ಅಶ್ವಿನ್ ಅವರ ಸ್ಪಿನ್ ಮೋಡಿಗೆ ಮುಂದೆ ಮುಂಡಿಯೂರಿತು. ಗೂಗ್ಲಿಗಳ ಮೂಲಕ ವಿಂಡೀಸ್​ ಬ್ಯಾಟರ್​ಗಳನ್ನು ಕಂಗೆಡಿಸಿದ ಅಶ್ವಿನ್ 60 ರನ್​ ನೀಡಿ 5 ವಿಕೆಟ್ ಕಬಳಿಸಿದ್ದರು. ಮತ್ತೊಂದೆಡೆ ರವೀಂದ್ರ ಜಡೇಜಾ 3 ವಿಕೆಟ್ ಪಡೆದರು. ಪರಿಣಾಮ ವೆಸ್ಟ್ ಇಂಡೀಸ್ ತಂಡವು 150 ರನ್​ಗಳಿಗೆ ಸರ್ವಪತನ ಕಂಡಿತು.

Bình luận


bottom of page