ಆನಂದಪುರ: ಪಟ್ಟಣದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಗೆ ಬೈ ಪಾಸ್ ಯೋಜನೆ ರೂಪಿಸಲಾಗುತ್ತಿದ್ದು, ಏಕಕಾಲಕ್ಕೆ ರೈತರು, ವ್ಯಾಪಾರಸ್ಥರು ಕಂಗಾಲಾಗುವಂತೆ ಮಾಡಿದೆ. ತುಮಕೂರು-ಹೊನ್ನಾವರ ಸಂಪರ್ಕದ ರಾಷ್ಟ್ರೀಯ ಹೆದ್ದಾರಿ-69 ಆನಂದಪುರಂ ಮಧ್ಯೆ ಹಾದುಹೋಗಿದೆ. ಈ ಹೆದ್ದಾರಿ ಮೊದಲ ಹಂತದಲ್ಲಿ ಶಿವಮೊಗ್ಗದ ತ್ಯಾವರೆಕೊಪ್ಪದಿಂದ ಇಲ್ಲಿನ ಸಿದ್ದೇಶ್ವರ ಕಾಲೊನಿ ವರೆಗೆ ಚತುಷ್ಪಥವಾಗಿ ಮೇಲ್ದರ್ಜೆಗೇರಿದೆ.
ಈ ಚತುಷ್ಪಥ ನಿರ್ಮಿಸಲು ಹೆದ್ದಾರಿ ಪ್ರಾಧಿಕಾರ ಯಡೇಹಳ್ಳಿಯಿಂದ ದಾಸಕೊಪ್ಪದ ಮೂಲಕ ಬೈಪಾಸ್ ಯೋಜನೆ ರೂಪಿಸಿದೆ. ಬೈಪಾಸ್ ಮಾರ್ಗ ಇಲ್ಲಿನ ವಿಶಾಲವಾದ ಗುಂಡಿ ಗದ್ದೆ ಮೂಲಕ ಹಾದು ಹೋಗುತ್ತದೆ. ಇದರಿಂದ ಸುಮಾರು 30 ರೈತರ ಒಟ್ಟು 50 ಎಕರೆಗೂ ಅಧಿಕ ಭತ್ತದ ಗದ್ದೆ ಹೆದ್ದಾರಿ ಪಾಲಾಗಲಿದೆ. ಹಲವಾರು ಶತಮಾನಗಳಿಂದ ಭತ್ತ ಬೆಳೆಯುತ್ತಾ ಬಂದ ಅತ್ಯಂತ ಫಲವತ್ತಾದ ಕೃಷಿ ಭೂಮಿ ಹೆದ್ದಾರಿ ಪಾಲಾಗಲಿದೆ ಎಂಬ ಆತಂಕ ರೈತರನ್ನು ಕಾಡುತ್ತಿದೆ.
ಇದೇ ಮಾರ್ಗದಲ್ಲಿ ರಾಣಿಬೆನ್ನೂರು- ಬೈಂದೂರು ಸಂಪರ್ಕದ ರಾಷ್ಟ್ರೀಯ ಹೆದ್ದಾರಿ-766ಸಿ ಸಹ ದಾಸಕೊಪ್ಪದಿಂದ ಯಡೇಹಳ್ಳಿ ಮೂಲಕ ಶಾಂತಬೈಲು ತಲುಪಿ ಇರುವಕ್ಕಿಯ ಕೃಷಿ ವಿವಿ ಬಳಿ ಸೇರಿ ಬಟ್ಟೆಮಲ್ಲಪ್ಪ ಮೂಲಕ ಹೊಸನಗರ ಸಂಪರ್ಕ ಮಾಡಲಿದೆ. ಈ ಹೆದ್ದಾರಿ ಸಹ ಗುಂಡಿ ಗದ್ದೆ ಬಯಲಿನ ಚತುಷ್ಪಥ ರಸ್ತೆಗೆ ಹೊಂದಿಕೊಂಡು ಸಾಗಲಿದೆ. ಈ ರೀತಿ ಎರಡು ರಾಷ್ಟ್ರೀಯ ಹೆದ್ದಾರಿಗಾಗಿ ಬೈ ಪಾಸ್ ನಿರ್ಮಿಸುವ ಯೋಜನೆ ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಯಡೇಹಳ್ಳಿಯಿಂದ ಆನಂದಪುರಂ ಮೂಲಕ ದಾಸಕೊಪ್ಪ ವೃತ್ತದ ವರೆಗೆ 400ಕ್ಕೂ ಅಧಿಕ ವ್ಯಾಪಾರಸ್ಥರು ಅಂಗಡಿ ಮುಂಗಟ್ಟು ನಿರ್ಮಿಸಿ ವಹಿವಾಟು ನಡೆಸುತ್ತಿದ್ದಾರೆ. 1999ರಲ್ಲಿ ತುಮಕೂರು-ಹೊನ್ನಾವರ ರಸ್ತೆ ರಾಷ್ಟ್ರೀಯ ಹೆದ್ದಾರಿಯಾದಾಗ ಇಲ್ಲಿನ ಹಲವು ಅಂಗಡಿ ಮುಂಗಟ್ಟುಗಳ ಮಾಲೀಕರು ಹೆದ್ದಾರಿ ಮಾರ್ಜಿನ್ ಬಿಟ್ಟು ಹಿಂದಕ್ಕೆ ಹೊಸ ಕಟ್ಟಡ ನಿರ್ಮಿಸಿಕೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿಗೆ ಬೈಪಾಸ್ ಆದರೆ, ಪಟ್ಟಣದ ಒಳಭಾಗ ವಾಹನ ಮತ್ತು ಜನರ ಸಂಪರ್ಕದಿಂದ ದೂರವಾಗಲಿದೆ. ವ್ಯಾಪಾರ-ವಹಿವಾಟಿಗೆ ಕೊಡಲಿ ಪೆಟ್ಟು ಬಿಳಲಿದೆ ಎಂಬ ಆತಂಕ ವ್ಯಾಪಾರಸ್ಥರದ್ದು.
ಬೈಪಾಸ್ ಬೇಡವೇ ಬೇಡ ಎಂದು ಭತ್ತ ಬೆಳೆಯುವ ರೈತರು ಮತ್ತು ವ್ಯಾಪಾರಿಗಳು ಸಾಗರದ ಉಪ ವಿಭಾಗಾಧಿಕಾರಿ ಕಚೇರಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ. ಶಿವಮೊಗ್ಗ-ಸಾಗರ ಸಂಪರ್ಕದ ಈಗಿರುವ ಹೆದ್ದಾರಿಯನ್ನು ಈಗಿರುವ ಮಾರ್ಗದಲ್ಲೇ ಚತುಷ್ಪಥವಾಗಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
Comments