top of page
Writer's picturevishwa patha

ಇಂಟರ್‌ನೆಟ್‌ ಬಳಕೆದಾರರಿಗೆ ಸಂಕಷ್ಟ ತರುವ 3 ಮಾಲ್‌ವೇರ್‌ಗಳು

ಸೈಬರ್ ದಾಳಿಕೋರರು ತಮ್ಮ ಕಾರ್ಯಸಾಧನೆಗೋಸ್ಕರ ಮಾಲ್‌ವೇರ್‌ಗಳನ್ನು ಹರಿಬಿಡುತ್ತಿರುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಹೀಗಾಗಿ, ಈ ಬಗ್ಗೆ ಎಚ್ಚರಿಕೆ ಬಹಳ ಅಗತ್ಯ. ಕಂಪ್ಯೂಟರ್ ಅಥವಾ ನೆಟ್‌ವರ್ಕ್‌ನಿಂದ ಬಳಕೆದಾರರ ಡೇಟಾವನ್ನು ಹಾನಿಗೈಯಲು ಅಥವಾ ಸೂಕ್ಷ್ಮ ಮಾಹಿತಿಗಳಿಗೆ ಕನ್ನ ಹಾಕುವ ದುರುದ್ದೇಶಪೂರಿತ ವೈರಸ್‌ ಅನ್ನು ಹರಿಬಿಡುವ ಅಥವಾ ಬಳಸುವ ಕ್ರಿಯೆಯೇ ಮಾಲ್‌ವೇರ್ ದಾಳಿ. ಈಗ ಇಂತಹ ದಾಳಿಗಳು ಸಾಮಾನ್ಯವಾಗುತ್ತಿವೆ. ಜೊತೆಗೆ ಈಗ ಮೂರು ವಿಭಿನ್ನ ಮಾಲ್‌ವೇರ್ ತಳಿಗಳು ಇಂಟರ್‌ನೆಟ್‌ ಬಳಕೆದಾರರನ್ನು ಬಲೆಗೆ ಬೀಳಿಸಲು ಕಾಯುತ್ತಿವೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.



ಡಾರ್ಕ್‌ಗೇಟ್‌

2023ರ ಜೂನ್‌ನಲ್ಲಿ ಕ್ಯಾಸ್ಪರ್ಸ್ಕಿಯ ತಜ್ಞರು ಡಾರ್ಕ್‌ಗೇಟ್ ಎಂಬ ಹೊಸ ಲೋಡರ್ ಅನ್ನು ಕಂಡುಹಿಡಿದ್ದರು. ಇದು ಬಹುಫೀಚರ್‌ ಅನ್ನು ಹೊಂದಿದೆ ಎಂಬುದನ್ನೂ ಸಂಶೋಧಕರು ಪತ್ತೆಹಚ್ಚಿದ್ದರು. ಬ್ರೌಸರ್‌ ಹಿಸ್ಟರಿ ಕಳ್ಳತನ, ಫೈಲ್ ಮ್ಯಾನೇಜ್ಮೆಂಟ್‌, ರಿವರ್ಸ್‌ ಪ್ರಾಕ್ಸಿ, ಹಿಟನ್ ವಿಎನ್‌ಸಿ ಸೇರಿ ಇದು ಸಾಕಷ್ಟು ಫೀಚರ್ ಅನ್ನು ಹೊಂದಿದ್ದು, ಇಂಟರ್‌ನೆಟ್‌ ಬಳಕೆದಾರರಿಗೆ ಹಾನಿ ತರುವ ಸಾಮರ್ಥ್ಯ ಹೊಂದಿದೆ. ನಾಲ್ಕು ಹಂತಗಳ ಸರಣಿಯ ಮೂಲಕ ಕಾರ್ಯನಿರ್ವಹಿಸುವ ಡಾರ್ಕ್‌ಗೇಟ್‌ ಅನ್ನು ಮಾಲ್‌ವೇರ್‌ನ ಲೋಡ್‌ಗೆ ಕಾರಣವಾಗುವಂತೆ ವಿನ್ಯಾಸಗೊಳಿಸಲಾಗಿದೆ.


ಎಮೋಟೆಟ್

ಎಮೋಟೆಟ್‌ ಅನ್ನು 2021ರಲ್ಲಿ ತೆಗೆದುಹಾಕಲಾಗಿದ್ದರೂ ಇದು ಮತ್ತೆ ಮರುಕಳಿಸಿದೆ. ಈ ಮಾಲ್‌ವೇರ್‌ನ ಚಟುವಟಿಕೆಗಳನ್ನು ಇತ್ತೀಚೆಗೆ ದಾಖಲಿಸಲಾಗಿದೆ ಎಂದೂ ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಮಾಲ್‌ವೇರ್‌ನ ಇತ್ತೀಚಿನ ಕ್ಯಾಂಪೇನ್‌ನಲ್ಲಿ ದುರುದ್ದೇಶಪೂರಿತ OneNote ಫೈಲ್‌ಗಳನ್ನು ಬಳಕೆದಾರರು ತಿಳಿಯದೇ ತೆರೆದಾಗ ಅದು ಗುಪ್ತ ಮತ್ತು ವಂಚನೆಯ ವಿಬಿಸ್ಕ್ರಿಪ್ಟ್‌ನ ಕಾರ್ಯಗತಗೊಳಿಸುವಿಕೆಗೆ ಕಾರಣವಾಗುತ್ತದೆ. ಇದು ಬಳಿಕ ಬಳಕೆದಾರರ ಸಿಸ್ಟಮ್‌ ಅನ್ನು ಯಶಸ್ವಿಯಾಗಿ ನಿಯಂತ್ರಣಕ್ಕೆ ತೆಗೆದುಕೊಳ್ಳುವುದರಿಂದ ತೊಡಗಿ ವಿವಿಧ ವೆಬ್‌ಸೈಟ್‌ಗಳಿಂದ ಹಾನಿಕಾರಕ ಪೇಲೋಡ್ ಅನ್ನು ಡೌನ್‌ಲೋಡ್ ಮಾಡಲು ಪ್ರಯತ್ನಿಸುತ್ತದೆ.


ಲೋಕಿಬಾಟ್

ಲೋಕಿಬಾಟ್ ಕಾರ್ಗೋ ಶಿಪ್ ಕಂಪನಿಗಳನ್ನು ಗುರಿಯಾಗಿಸಿಕೊಂಡು ನಡೆಸುವ ಫಿಶಿಂಗ್ ಅಭಿಯಾನ. ಇದನ್ನೂ ಕ್ಯಾಸ್ಪರ್ಸ್ಕಿ ತಜ್ಞರು ಪತ್ತೆ ಹಚ್ಚಿದ್ದಾರೆ. ಇದೂ ಮಾಹಿತಿಯನ್ನು ಕಳ್ಳತನ ಮಾಡುವ ಮಾಲ್‌ವೇರ್. 2016ರಲ್ಲಿ ಮೊದಲ ಬಾರಿಗೆ ಇದನ್ನು ಗುರುತಿಸಲಾಗಿತ್ತು. ಬ್ರೌಸರ್‌ಗಳು ಮತ್ತು ಎಫ್‌ಟಿಪಿ ಕ್ಲೈಂಟ್‌ಗಳು ಸೇರಿದಂತೆ ವಿವಿಧ ಅಪ್ಲಿಕೇಶನ್‌ಗಳಿಂದ ದಾಖಲೆಗಳು, ಆಧಾರಗಳನ್ನು ಕದಿಯುವ ರೀತಿಯಲ್ಲಿ ಲೋಕಿಬಾಟ್ ಅನ್ನು ವಿನ್ಯಾಸಗೊಳಿಸಲಾಗಿದೆ. ಈ ಇ-ಮೇಲ್ ಸಂದೇಶಗಳು ಎಕ್ಸೆಲ್ ಡಾಕ್ಯುಮೆಂಟ್ ಅಟ್ಯಾಚ್‌ಮೆಂಟ್‌ ಅನ್ನು ಹೊಂದಿದ್ದು, ಇದು ಮ್ಯಾಕ್ರೋಗಳನ್ನು ಸಕ್ರಿಯಗೊಳಿಸಲು ಕಾರಣವಾಗುತ್ತವೆ.


ಈ ರೀತಿಯ ಮಾಲ್‌ವೇರ್‌ಗಳು ಸದಾ ಕಾಡುತ್ತಲೇ ಇರುತ್ತವೆ.ಗೊತ್ತಿಲ್ಲದ ಲಿಂಕ್‌ ಮತ್ತು ಅಟ್ಯಾಚ್‌ ಆದ ಫೈಲ್‌ಗಳ ಬಗ್ಗೆ ಎಚ್ಚರವಿರಲಿ. ನಿಮ್ಮ ಡಿವೈಸ್‌ನ ಸಾಫ್ಟ್‌ವೇರ್‌ ಅನ್ನು ಅಪ್‌ಡೇಟ್‌ ಮಾಡಿಟ್ಟುಕೊಳ್ಳಿ ಮತ್ತು ವೈರಸ್ ದಾಳಿಯನ್ನು ತಡೆಯುವ ವಿಶ್ವಾಸಾರ್ಹ ಭದ್ರತಾ ಪರಿಹಾರ ಕ್ರಮಗಳನ್ನೂ ಬಳಸಿ.

תגובות


bottom of page