ತಾರಾಗಣ: ಸಿಲಿಯನ್ ಮರ್ಫಿ, ಎಮಿಲಿ ಬ್ಲಂಟ್, ಮ್ಯಾಟ್ ಡ್ಯಾಮನ್, ರಾಬರ್ಟ್ ಡೌನಿ ಜೂನಿಯರ್, ಫ್ಲಾರೆನ್ಸ್ ಪಗ್, ಜೋಶ್ ಹಾರ್ಟ್ನೆಟ್, ಕೇಸಿ ಅಫ್ಲೆಕ್, ರಾಮಿ ಮಾಲೆಕ್, ಕೆನ್ನೆತ್ ಬ್ರನಾಗ್
ನಿರ್ದೇಶಕ: ಕ್ರಿಸ್ಟೋಫರ್ ನೋಲನ್
ನಿರ್ಮಾಪಕರು: ಎಮ್ಮಾ ಥಾಮಸ್, ಚಾರ್ಲ್ಸ್ ರೋವೆನ್, ಕ್ರಿಸ್ಟೋಫರ್ ನೋಲನ್
ಸಂಗೀತ ನಿರ್ದೇಶಕ: ಲುಡ್ವಿಗ್ ಗೊರಾನ್ಸನ್
ಛಾಯಾಗ್ರಾಹಕ: ಹೊಯ್ಟೆ ವ್ಯಾನ್ ಹೊಯ್ಟೆಮಾ
ಕ್ರಿಸ್ಟೋಫರ್ ನೋಲನ್ ಸಿನಿಮಾ ಎಂದರೆ ಭೌತಶಾಸ್ತ್ರ, ಐನ್‌ಸ್ಟೀನ್ ಸೂತ್ರವನ್ನೇ ಒಳಗೊಂಡ ಕಥೆ ಇರುವುದು ಸಹಜ. ಅದರಂತೆಯೇ ಐನ್‌ಸ್ಟೀನ್ ಗುರುತ್ವ ಸೂತ್ರವೇ ಗುರುವಾಗಿರುವ ಅಣು ವಿಜ್ಞಾನವನ್ನು, ಅಣು ವಿಜ್ಞಾನಿಯ ಜೀವನಚರಿತ್ರೆಯನ್ನೇ ಪ್ರಮುಖ ಕಥೆಯಾಗಿ ಹೊಂದಿರುವ ಚಿತ್ರ ಓಪನ್‌ಹೈಮರ್.
ಮೂರು ಗಂಟೆ ಎರಡು ನಿಮಿಷದ ಸುದೀರ್ಘ ಸಿನಿಮಾ ಮುಗಿಯುವ ಹೊತ್ತಿಗೆ ಪ್ರೇಕ್ಷಕನಿಗೆ ಸ್ವತಃ ಅಣುಬಾಂಬ್ ತಯಾರಿಕಾ ಪ್ರಯೋಗಾಲಯವೊಂದಕ್ಕೆ ಹೋಗಿ ಬಂದ ಅನುಭವವಾಗಿರುತ್ತದೆ. ಹಿರೋಶಿಮಾ–ನಾಗಾಸಾಕಿ ಅಣುಬಾಂಬ್ ದುರಂತವನ್ನು ಜಗತ್ತು ಈಗಲೂ ಮರೆತಿಲ್ಲ. ಅದಕ್ಕೆ ಬೇಕಾದ ಅಣುಬಾಂಬ್ ಆವಿಷ್ಕರಿಸಿದ ರಾಬರ್ಟ್ ಓಪನ್‌ಹೈಮರ್ ಎಂಬ ಅಮೆರಿಕದ ವಿಜ್ಞಾನಿಯ ಬದುಕಿನ ನೈಜ ಕಥೆಯೇ ಚಿತ್ರವಾಗಿದೆ.
ಹೈಮರ್ ಪ್ರೀತಿ, ಸಂಬಂಧಗಳು, ನಾಜಿ, ಕಮ್ಯುನಿಸ್ಟ್ ರಾಜಕೀಯದ ನಡುವೆ ಸುಲಭವಾಗಿ ಅರ್ಥವಾಗದ ಒಂದಷ್ಟು ಭೌತವಿಜ್ಞಾನದ ಅಂಶಗಳು ಬಂದು ಹೋಗುತ್ತವೆ. ವಿಜ್ಞಾನವನ್ನು ಸಕಾರಾತ್ಮಕ ಸಂಗತಿಗಳಿಗಷ್ಟೇ ಬಳಸಿಕೊಳ್ಳಬೇಕು ಎಂಬ ನಿಲುವಿನ ಹೈಮರ್, ಅಣುಬಾಂಬ್ ಸಿದ್ಧಪಡಿಸುವ ಯೋಜನೆಯೊಂದಕ್ಕೆ ಮುಖ್ಯಸ್ಥರಾಗುವಲ್ಲಿಂದ ಕಥೆ ಮತ್ತೊಂದು ದಿಕ್ಕಿಗೆ ತಿರುವು ಪಡೆಯುತ್ತದೆ.
ಪ್ಲಸ್ ಪಾಯಿಂಟ್
ಕ್ರಿಸ್ಟೋಫರ್ ನೋಲನ್ ನಿರ್ದೇಶನದ ಸಿನಿಮಾಗಳಲ್ಲಿ ಪ್ರತಿ ಫ್ರೇಮ್‌ನಲ್ಲೂ ಭವ್ಯತೆಯನ್ನು ಕಾಣಬಹುದು, ಓಪನ್‌ಹೈಮರ್ ಸಿನಿಮಾದಲ್ಲಿ ಪರಮಾಣು ಬಾಂಬ್ ತಯಾರಿಸಿದ ಕಥೆಯನ್ನಿಟ್ಟುಕೊಂಡು ಭಾವನಾತ್ಮಕವಾಗಿ ಚಿತ್ರಿಸುವುದರ ಜೊತೆಗೆ, ಬಾಂಬ್ ಸೃಷ್ಟಿಕರ್ತನ ಆತ್ಮಕಥೆ ಹೇಳುವಲ್ಲಿ ನಿರ್ದೇಶಕ ಯಶಸ್ವಿಯಾಗಿದ್ದಾರೆ.
ಮೈನಸ್ ಪಾಯಿಂಟ್
೩ ಗಂಟೆಗಳ ದಿರ್ಘಾವಧಿಯ ಚಿತ್ರವು ಬೇಸರವನ್ನುಂಟುಮಾಡಬಹುದು, ನಿರೂಪಣಾ ಶೈಲಿಯು ನಿಧಾನಗತಿಯಲ್ಲಿ ಸಾಗುವುದರಿಂದ ಪ್ರೇಕ್ಷರನ್ನು ಹಿಡಿದಿಡುವುದರಲ್ಲಿ ನಿರ್ದೇಶಕ ಸೋತಿದ್ದಾನೆ. ಚಿತ್ರಕಥೆಯಲ್ಲಿ ಚದುರಿದ ಟೈಮ್‌ಲೈನ್‌ಗಳ ಬಳಕೆಯಿಂದಾಗಿ ಓಪನ್‌ಹೈಮರ್‌ನ ಜೀವನದ ಸೀಮಿತ ಜ್ಞಾನವನ್ನು ಹೊಂದಿರುವ ವೀಕ್ಷಕರಿಗೆ ಈ ಚಿತ್ರ ಸವಾಲೇನಿಸುತ್ತದೆ. ಹೆಚ್ಚು ಪಾತ್ರಗಳು ಬಂದು ಹೋಗುವುದರಿಂದಾಗಿ ಓಪನ್‌ಹೈಮರ್‌ನ ಕಥೆ ಗೊತ್ತಿಲ್ಲದವರಿಗೆ ಗೊಂದಲ ಉಂಟಾಗುವುದು ಸಹಜ.
ತಾಂತ್ರಿಕ ಅಂಶಗಳು:
ಕ್ರಿಸ್ಟೋಫರ್ ನೋಲನ್ ನಿರ್ದೇಶನವು ಓಪನ್‌ಹೈಮರ್‌ನ ಜೀವನದ ಏರಿಳಿತಗಳನ್ನು ಸಂಪೂರ್ಣವಾಗಿ ಈ ಚಿತ್ರದಲ್ಲಿ ನಿರೂಪಿಸಿದ್ದಾರೆ ಎನ್ನಬಹುದು. ಚಿತ್ರದಲ್ಲಿ ಉನ್ನತ ಮಟ್ಟದ ಧ್ವನಿ ವಿನ್ಯಾಸವು ಉತ್ತಮವಾಗಿದೆ. ಛಾಯಾಗ್ರಹಣವು ಅತ್ಯುತ್ತಮವಾಗಿದೆ, ಆದರೆ ಕೆಲವು ಅನಗತ್ಯ ದೃಶ್ಯಗಳನ್ನು ತೆಗೆದುಹಾಕುವ ಮೂಲಕ ಮೊದಲಾರ್ಧವನ್ನು ಇನ್ನಷ್ಟು ಉತ್ತಮವಾಗಿ ನಿರೂಪಿಸಬಹುದಿತ್ತು. ಅದೇಗೂ CGI ಇಲ್ಲದೆ ಪರಮಾಣು ಬಾಂಬ್ ಸ್ಫೋಟ ಚಿತ್ರಿಸುವಲ್ಲಿ ಚಿತ್ರ ತಂಡ ಇಲ್ಲಿ ಗೆದ್ದಿದೆ.
ನೋಲನ್ ಶೈಲಿಯ ಹಿಂದಿನ ಸಿನಿಮಾಗಳಂತೆ ಇಲ್ಲಿಯೂ ಮೂರು ಕಡೆಗಳಿಂದ, ಎರಡು ಕಾಲಘಟ್ಟಗಳಲ್ಲಿ ಕಥೆ ಸಾಗುತ್ತದೆ. ಆದರೆ ಇದು ಜೀವನಚರಿತ್ರೆಯ ರೀತಿಯ ಕಥೆಯಾಗಿದ್ದರಿಂದ ವೈಜ್ಞಾನಿಕ ಕಲ್ಪನೆ, ತರ್ಕಗಳಿಗೆ ಅವಕಾಶವಿಲ್ಲದೆ ಸುಲಭವಾಗಿ ಅರ್ಥವಾಗುತ್ತದೆ. ಅಣುವಿಜ್ಞಾನಿ ಓಪನ್‌ಹೈಮರ್ ಅವರನ್ನು ನ್ಯಾಯಾಲಯ ವಿಚಾರಿಸುವ ಸಂದರ್ಭ ಒಂದೆಡೆಯಾದರೆ, ಅವರ ಸಂಶೋಧನೆ ಇನ್ನೊಂದು ಕಾಲಘಟ್ಟ. ಜರ್ಮನಿಯಲ್ಲಿದ್ದ ಓಪನ್‌ಹೈಮರ್ ಅಮೆರಿಕಕ್ಕೆ ವಾಪಸ್ ಬಂದು ದೇಶದಲ್ಲಿಯೇ ಮೊದಲ ಸಲ ಕ್ವಾಟಂ ಫಿಸಿಕ್ಸ್ ತರಗತಿ ಪ್ರಾರಂಭಿಸುವುದರಿಂದ ಕಥೆ ಶುರುವಾಗುತ್ತದೆ.
ಓಪನ್‌ಹೈಮರ್ ಆಗಿ ನಟ ಕಿಲಿಯನ್ ಮರ್ಫಿ ಇಡೀ ಚಿತ್ರವನ್ನು ಆವರಿಸಿಕೊಳ್ಳುತ್ತಾರೆ. ವಿಜ್ಞಾನಿಯಾಗಿ, ಗಂಡನಾಗಿ, ತಂಡದ ಮುಖ್ಯಸ್ಥನಾಗಿ ಬೇರೆ- ಬೇರೆ ಭಾವಗಳಲ್ಲಿ ಮರ್ಫಿ ಪ್ರೇಕ್ಷಕರನ್ನು ಹಿಡಿದಿಡುತ್ತಾರೆ. ರಾಬರ್ಟ್ ಡೌನಿ, ಫ್ಲಾರೆನ್ಸ್, ಎಮಿಲಿ ಮುಂತಾದ ಸಹ ಕಲಾವಿದರು ಕೂಡ ತಂತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಚಿತ್ರದ ವಸ್ತು ಗಂಭೀರವಾದರೂ ನೋಲನ್ ಮಾತುಗಳಿಂದ ಅಲ್ಲಲ್ಲಿ ನೋಡುಗನನ್ನು ನಗಿಸುವ ಪ್ರಯತ್ನ ಮಾಡಿದ್ದಾರೆ. ಅಣುಬಾಂಬ್ ಸ್ಫೋಟ, ಸಂಶೋಧನೆ ನಗರವಾದ ಲಾಸ್ ಆಲ್ಮೋಸ್ ಪ್ರಯೋಗಾಲಯದ ದೃಶ್ಯಗಳು ಕಣ್ಣಿಗೆ ಕಟ್ಟುವಂತಿವೆ.
ಒಟ್ಟಿನಲ್ಲಿ ಒಪೆನ್‌ಹೈಮರ್ ಚಿತ್ರದ ಮುಖಾಂತರ ಮತ್ತೊಮ್ಮೆ ಕ್ರಿಸ್ಟೋಫರ್ ನೋಲನ್ ಅವರು ಕಥೆಗಳನ್ನು ತೆರೆಯ ಮೇಲೆ ನಿರೂಪಿಸುವಲ್ಲಿ ಅದ್ಭುತ ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಸಿಲಿಯನ್ ಮರ್ಫಿ ಅವರ ಅಭಿನಯವು ಉತ್ತಮವಾಗಿದೆ. ಇದರ ಜೊತೆಗೆ ಬರುವ ಅನೇಕ ಪಾತ್ರಗಳು ಕಥೆಗೆ ಜೀವ ತುಂಬಿ ಅಭಿನಯಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಬಹುದು.
Comments