ತಮಿಳುನಾಡು: ದ್ರಾವಿಡನಾಡು ಎಂದು ಕರೆಸಿಕೊಳ್ಳುವ ತಮಿಳುನಾಡಿನ ಕೆಲ ದೇವಸ್ಥಾನಗಳಲ್ಲಿ ಇನ್ಮುಂದೆ ಮಹಿಳೆಯರೇ ಅರ್ಚಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಅರ್ಚಕರ ತರಬೇತಿಯನ್ನು ಪೂರ್ಣಗೊಳಿಸಿದ ತಮಿಳುನಾಡಿನ ಮೂವರು ಯುವತಿಯರು ಶೀಘ್ರದಲ್ಲೇ ತಮಿಳುನಾಡಿನ ದೇವಾಲಯಗಳಲ್ಲಿ ಸಹಾಯಕ ಅರ್ಚಕರಾಗಿ ಸೇವೆ ಸಲ್ಲಿಸಲಿದ್ದಾರೆ.
ಅರ್ಚಕಿಯರಾದ ಕೃಷ್ಣವೇಣಿ, ಎಸ್ ರಮ್ಯಾ ಮತ್ತು ಎನ್ ರಂಜಿತಾ ಅವರನ್ನು ರಾಜ್ಯ ಸರ್ಕಾರದ ಅಡಿಯಲ್ಲಿ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯು ನಿರ್ವಹಿಸುವ ದೇವಾಲಯಗಳಲ್ಲಿ ಅರ್ಚಕರನ್ನಾಗಿ ನೇಮಿಸಲಾಗುತ್ತದೆ ಎಂದು ತಮಿಳುನಾಡು ಸರ್ಕಾರ ತಿಳಿಸಿದೆ.
ತಮಿಳುನಾಡಿನ ಶ್ರೀರಂಗಂ ಶ್ರೀ ರಂಗನಾಥರ ದೇವಸ್ಥಾನದ ಅರ್ಚಕರ ತರಬೇತಿ ಶಾಲೆಯಲ್ಲಿ, ಅರ್ಚಕ ತರಬೇತಿ ಪೂರ್ಣಗೊಳಿಸಿದ ಪುರುಷ ಪ್ರಶಿಕ್ಷಣಾರ್ಥಿಗಳೊಂದಿಗೆ, ಈ ಮೂವರು ಮಹಿಳೆಯರಿಗೂ ಸಹ ತಮಿಳುನಾಡು ಸಚಿವ ಸೇಕರ್ ಬಾಬು ಪ್ರಮಾಣಪತ್ರಗಳನ್ನು ನೀಡಿದರು.
ಈ ಕುರಿತು ಟ್ವೀಟ್ ಮಾಡಿರುವ ತಮಿಳುನಾಡಿನ ಸಿಎಂ ಎಂ.ಕೆ ಸ್ಟಾಲಿನ್ ಇನ್ಮುಂದೆ "ದ್ರಾವಿಡ ಆಡಳಿತ ಮಾದರಿಯಲ್ಲಿ ಮಹಿಳಾ ಅರ್ಚಕರು ದೇವಸ್ಥಾನಗಳಲ್ಲಿ ಪೂಜೆ ಮಾಡಲಿದ್ದು, ಎಲ್ಲಾ ಜಾತಿಯ ಜನರನ್ನು ದೇವಾಲಯಗಳ ಅರ್ಚಕರನ್ನಾಗಿ ನೇಮಿಸಿ, ನಮ್ಮ ತಮಿಳುನಾಡಿನ ದ್ರಾವಿಡ ಮಾದರಿಯ ಸರ್ಕಾರ ತಂತಾಯ್ ಪೆರಿಯಾರ್ ಅವರ ಹೃದಯದ ಮುಳ್ಳು ತೆಗೆದಿದ್ದೆವೆ. ಈಗ ಮಹಿಳೆಯರೂ ಗರ್ಭಗುಡಿಗೆ ಕಾಲಿಡುವುದರ ಮೂಲಕ ಸಮಾನತೆಯ ನವ ಯುಗವನ್ನು ತರುತ್ತಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ.
ತಮಿಳುನಾಡಿನಲ್ಲಿ 2021ರಲ್ಲಿ ಅಧಿಕಾರಕ್ಕೆ ಬಂದ ವಿಡ ಮುನೇತ್ರ ಕಳಗಂ (ಡಿಎಂಕೆ) ಸರ್ಕಾರ, ಎಲ್ಲಾ ಜಾತಿಯ ಜನರಿಗೆ ಅರ್ಚಕ ತರಬೇತಿ ನೀಡಲಾಗುವುದು ಎಂದು ಘೋಷಿಸಿದ್ದರು. ಇದೇ ಸಮಯದಲ್ಲಿ ಆಸಕ್ತಿ ಇರುವ ಮಹಿಳೆಯರು ಸಹ ತರಬೇತಿಯನ್ನು ಪಡೆಯಬಹುದು ಎಂದು ಹೇಳಿದ್ದರು. ಇದರಿಂದ ಪ್ರಭಾವಿತರಾದ ಕೃಷ್ಣವೇಣಿ, ಎಸ್.ರಮ್ಯಾ, ಮತ್ತು ಎನ್.ರಂಜಿತಾ ತರಬೇತಿಗೆ ಸೇರಲು ನಿರ್ಧರಿಸಿ ಇಂದು ಅರ್ಚಕರ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ.
Comments