top of page

ಸತ್ಯವೆಂಬ ಅಸತ್ಯ

  • Writer: vishwa patha
    vishwa patha
  • Dec 2, 2023
  • 1 min read



ಸತ್ಯವೆ ಜೀವನ

ಮಾಡಿಕೊಂಡ ಅಪ್ಪನ

ಶ್ರದ್ದೆಗಿಂತ, ಆತ ಹಾಕಿದ

ಜನಿವಾರವೆ ಮಗನಿಗೆ

ಪ್ರಿಯವಾಗುತ್ತಿರುವ ಕಾಲದಲ್ಲಿ ನಿಂತು

ಸಮಾನತೆಯ ಹೇಗೆ ಕಾಣಲಿ?

ಹಸಿವಿಗಾಗಿ ಹಸುವ

ತಿಂದ ಬಡವನ

ಹಸಿವಿಗಿಂತ, ಗೋವು ಮತ್ತದರ ಮಾಂಸದ

ದಾಹವೆ ಚುರುಗುಟ್ಟುತ್ತಿರುವ ಕಾಲದಲ್ಲಿ ಬದುಕಿ

ಹಸಿವ ಹೇಗೆ ನೀಗಿಸಲಿ?

ಮೌನಿಯೊಬ್ಬನ ಮಂತ್ರಕ್ಕಿಂತ

ಮಾತುಗಾರನ ತಂತ್ರಗಳೆ

ಕ್ರಾಂತಿಯ ಸಿದ್ದಾಂತಗಳಾಗಿ

ಸಿಡಿದೇಳುತ್ತಿರುವ ಕಾಲದಲ್ಲಿ

ಕ್ರಾಂತಿ ಮಾಡಿ

ಏನ ಸಾಧಿಸಲಿ?

ಸುಚಿಗಿಂತ ರುಚಿ ಹುಡುಕುವ

ನಾಲಿಗೆ, ಸತ್ಯಕ್ಕಿಂತ ಮಿತ್ಯವನ್ನೆ

ಮೆಚ್ಚುವ ಮನದ ಜೋಳಿಗೆ

ಹಿಡಿದು ನಡೆಯುತ್ತಿರುವ ಕಾಲದಲ್ಲಿ

ನಡೆದು, ಏನ ತಲುಪಲಿ?

ಎಲ್ಲರೊಳು ಬೆರೆಸೊ ಪಟಸಾಲೆಗಿಂತ

ಕೋಣೆಗಳ ಕತ್ತಲೆಯ

ಗುಪ್ತತೆಯೆ ಅಚ್ಚುಮೆಚ್ಚಾಗುತ್ತಿರುವ ನಿಲುವಿನಲಿ

ಎಲ್ಲರು ಬಂದು ನಿಲ್ಲುವಂತ

ಗುಡಿಸಲಲೊಂದ ಕಟ್ಟಿ.

ಅಲ್ಲಲ್ಲಿ ದೀಪಗಳ ಹಚ್ಚಿಡುವ

ಬದುಕಿನ ಪ್ರಯತ್ನವೊಂದ ಹೇಗೆ ಸಾಧಿಸಲಿ.



-ಮೋಹನ ಕೊಳವಳ್ಳಿ



Comments


bottom of page