ಬೆಂಗಳೂರು: ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ಜೂನ್ 21 ರಿಂದ ಕರ್ನಾಟಕದ ಕರಾವಳಿ ಜಿಲ್ಲೆಗಳು ಸೇರಿ ಮಲೆನಾಡಿನ ಪ್ರದೇಶಗಳಲ್ಲಿ ಭರ್ಜರಿ ಮಳೆ ಬೀಳಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಹೀಗೆ ರಾಜಧಾನಿ ಬೆಂಗಳೂರು ಸೇರಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲೂ ಭರ್ಜರಿ ಮಳೆ ಬೀಳಲಿದೆ ಎನ್ನಲಾಗಿದೆ. ಜೂನ್ 21 ರಿಂದ ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಮಳೆ ಆರಂಭ ಆಗಲಿದ್ದು, ಜುಲೈ ಮೊದಲ ವಾರದವರೆಗೂ ಭಾರಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಪಶ್ಚಿಮ ಘಟ್ಟಗಳಲ್ಲಿ ಮಳೆ ಅಬ್ಬರ!
ಹಾಗೇ ಜೂನ್ 22ರ ನಂತರ ಮುಂಗಾರು ಮಾರುತಗಳು ಮತ್ತಷ್ಟು ಬಲವಾಗಿ ಕರ್ನಾಟಕ ರಾಜ್ಯದಲ್ಲಿ ಭರ್ಜರಿ ಮಳೆ ಸುರಿಸಲಿವೆ ಎನ್ನಲಾಗಿದೆ. ಪಶ್ಚಿಮ ಘಟ್ಟಗಳು & ಕರಾವಳಿ ಜಿಲ್ಲೆಗಳಲ್ಲಿ ಮುಂಗಾರು ಮಳೆ ಅಬ್ಬರಿಸಿ, ಬೊಬ್ಬಿರಿಯಲಿದೆ. ಈ ಮೂಲಕ ಕರ್ನಾಟಕದ ನದಿಗಳು ತುಂಬಿ ಹರಿಯಲಿದ್ದು ಕರ್ನಾಟಕದ ಡ್ಯಾಂಗಳಿಗೆ ಕೂಡ ಭಾರಿ ನೀರು ಹರಿದು ಬರುವ ನಿರೀಕ್ಷೆ ಇದೆ. ಉತ್ತರ ಕರ್ನಾಟಕದಲ್ಲಿ ಕೂಡ ಮಳೆ ಅಬ್ಬರಿಸಲಿದ್ದು, ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಜೂನ್ 18 ರಿಂದ 26 ರವರೆಗೂ ಭಾರಿ ಮಳೆ ಬೀಳುವ ನಿರೀಕ್ಷೆ ಇದೆ. ಹಾಗೇ, ಕಾವೇರಿ ಕೊಳ್ಳದಲ್ಲಿ ಕೂಡ ಭಾರಿ ಮಳೆ ಬೀಳುವ ನಿರೀಕ್ಷೆ ಇದ್ದು ಕನ್ನಡ ನಾಡಿನ ರೈತರು ನಿಟ್ಟುಸಿರು ಬಿಡುತ್ತಿದ್ದಾರೆ.
Komentar