top of page
Writer's picturevishwa patha

ಜೀವವೈವಿಧ್ಯ ಅಂಕಸಮುದ್ರ ಪಕ್ಷಿಧಾಮಕ್ಕೆ ನೀರು ನೀರುನಾಯಿಗಳ ಆಗಮನ

Updated: Sep 21, 2023

ಹಗರಿಬೊಮ್ಮನಹಳ್ಳಿ: ದೇಶ ವಿದೇಶದ ಪಕ್ಷಿಗಳಿಗೆ ಆಶ್ರಯತಾಣವಾಗಿದ್ದ ತಾಲೂಕಿನ ಅಂಕಸಮುದ್ರ ಪಕ್ಷಿಧಾಮದಲ್ಲಿ ಇದೀಗ ನೀರುನಾಯಿ(River Otter)ಗಳದ್ದೇ ಸದ್ದು, ತುಂಗಭದ್ರಾ ಹಿನ್ನೀರಿನ ಮೂಲಕ ಬಂದಿರುವ ನೀರುನಾಯಿಗಳು ಪಕ್ಷಿಧಾಮದ ವಿಶೇಷ ಅತಿಥಿಗಳಾಗಿ ಎಲ್ಲಾರ ಗಮನ ಸೆಳೆಯುತ್ತಿವೆ. ವಿಶೇಷವೆಂದರೆ ನೀರು ನಾಯಿಗಳು ಪಕ್ಷಿಧಾಮಕ್ಕೆ ಬಂದಿರುವುದು ಪಕ್ಷಿಗಳಿಗೆ ವರದಾನವಾಗಿದೆ. ಇಲ್ಲಿಯೇ ಮೊಟ್ಟೆ ಇಟ್ಟು ಮರಿ ಮಾಡುವ ಪಕ್ಷಿಗಳಿಗೆ ಶತ್ರುವಾಗಿದ್ದ ಮುರುಗೋಡು ಮೀನುಗಳು ನೀರು ನಾಯಿಗಳ ಪ್ರಮುಖ ಆಹಾರವಾಗಿದೆ, ಮೀನುಗಳನ್ನು ಹಿಡಿದು ತಿನ್ನುವ ನೀರುನಾಯಿ(River Otter)ಗಳು, ಕೆರೆಯಲ್ಲಿನ ಹಕ್ಕಿಗಳ ಮರಿಗಳ ಸಂರಕ್ಷಣೆಯಲ್ಲಿ ಪರೋಕ್ಷವಾಗಿ ಕೈಜೋಡಿಸುತ್ತಿರುವುದು ಪ್ರಕೃತಿಯ ವೈಶಿಷ್ಟ್ಯವಾಗಿದೆ.


Photo credit-Google

ನೀರುನಾಯಿ(River Otter)ಗಳು ಸಾಮಾನ್ಯವಾಗಿ ಸ್ವಚ್ಛವಾದ ನೀರಿನಲ್ಲಿ ಕಂಡುಬರುತ್ತವೆ. ಆದರೆ ಅಂಕಸಮುದ್ರ ಪಕ್ಷಿಧಾಮದ ಕೆರೆಯು ವೈಜ್ಞಾನಿಕ ನಿರ್ವಹಣೆ ಇಲ್ಲದೆ ನೀರು ಸ್ವಚ್ಚವಾಗಿಲ್ಲ, ಆದರೂ ಸಹ ಇಲ್ಲಿ ನೀರು ನಾಯಿಗಳು ಕಂಡು ಬಂದಿರುವುದು ಪರಿಸರ ತಜ್ಞರಲ್ಲಿ ಆಶ್ಚರ್ಯವನ್ನುಂಟುಮಾಡಿದೆ. ಇಲ್ಲಿನ ಕೆರೆಗಳಲ್ಲಿ ಮೀನುಗಳ ಸಂಖ್ಯೆ ಹೆಚ್ಚಾಗಿರುವ ಕಾರಣ ನೀರುನಾಯಿ(River Otter)ಗಳು ಬಂದಿರ ಬಹುದು ಎಂದು ಪಕ್ಷಿಪ್ರಿಯರ ಅಭಿಪ್ರಾಯ.


ಅರಣ್ಯ ಸಂರಕ್ಷಣೆ ಷೆಡ್ಯುಲ್‌ 1ರ ಪ್ರಕಾರ ನೀರುನಾಯಿ(River Otter)ಗಳು ಹುಲಿಯಷ್ಟೇ ಅಪರೂಪದ ಪ್ರಾಣಿಗಳಾಗಿವೆ. ನೀರು ನಾಯಿಗಳನ್ನು ಬೇಟೆಯಾಡಿ ಕೊಲ್ಲುವುದು, ಅರಣ್ಯ ಸಂರಕ್ಷಣಾ ಕಾಯಿದೆ 1972ರ ಅನ್ವಯ ಹುಲಿ ಕೊಂದಷ್ಟೇ ಅಪರಾಧವೆಂದು ಪರಿಗಣಿಸಲಾಗುತ್ತದೆ.

ಪಕ್ಷಿಧಾಮದ ಕೆರೆ ಪ್ರದೇಶ ದೇಶ-ವಿದೇಶದ ಹಕ್ಕಿಗಳ ತಾಣವಾಗುವ ಜೊತೆಗೆ ಜೀವವೈವಿಧ್ಯತೆಯ ತಾಣವಾಗಿದೆ. ಈಗಾಗಲೇ ಕೆರೆ ಪ್ರದೇಶದಲ್ಲಿ ಗ್ರೇಟರ್‌ ಕಾರ್ಮೊರೆಂಟ್‌, ಓರಿಯಂಟಲ್‌ ಡಾರ್ಟರ್‌, ಕೂಂಬ್‌ ಡಕ್‌, ಗ್ರೇ ಹೆರಾನ್‌, ಸ್ಪಾಟ್‌ಬಿಲ್ಡ್‌ ಡಕ್‌, ವಿಜಿಲಿಂಗ್‌ ಡಕ್‌, ಸೇರಿ ಹಲವಾರು ಪ್ರಭೇದದ ಹಕ್ಕಿಗಳು ಬಂದು ಸಂತಾನೋತ್ಪತ್ತಿ ಮಾಡುತ್ತಿವೆ. ಅಲ್ಲದೆ 30 ಜಾತಿಯ ಮೀನುಗಳು, 22 ಜಾತಿಯ ಹಾವುಗಳು, 35 ಜಾತಿ ಚಿಟ್ಟೆಗಳಿವೆ. 220 ಕ್ಕೂ ಹೆಚ್ಚು ಪ್ರಭೇದದ ಸ್ಥಳೀಯ ಹಕ್ಕಿಗಳು, 70ಕ್ಕೂ ಹೆಚ್ಚು ವಲಸೆ ಹಕ್ಕಿಗಳು ಹಾಗೂ ಪುನುಗುಬೆಕ್ಕುಗಳು ಕಂಡುಬರುವ ಜೀವವೈವಿಧ್ಯತೆಯ ತಾಣವೆಂಬ ಹಿರಿಮೆ ಪಕ್ಷಿಧಾಮಕ್ಕಿದೆ.


ಇತಂಹ ಜೀವವೈವಿಧ್ಯ ತಾಣವಾಗಿರುವ ಪಕ್ಷಿಧಾಮದಲ್ಲಿ ನೀರುನಾಯಿ(River Otter)ಗಳು ಕಾಣಿಸಿರುವುದು ಪಕ್ಷಿ ಪ್ರಿಯರಲ್ಲಿ ಸಂತಸ ಹೆಚ್ಚಿಸಿದೆ. ಏಕೆಂದರೆ ಹಕ್ಕಿಗಳು ಗೂಡು ಕಟ್ಟಿ ಮರಿ ಮಾಡುವ ಸಮಯದಲ್ಲಿ ಗೂಡಿನಿಂದ ಆಯತಪ್ಪಿ ನೀರಿಗೆ ಬೀಳುವ ಮರಿಗಳನ್ನು ಮುರುಗೋಡು ಮೀನುಗಳು ತಿನ್ನುತ್ತಿದ್ದವು, ಇದರಿಂದಾಗಿ ಹಕ್ಕಿಗಳ ಸಂತಾನೋತ್ಪತ್ತಿಯಲ್ಲಿ ಹಿನ್ನೆಡೆ ಉಂಟಾಗುತ್ತಿತ್ತು. ಆದರೆ ಈಗ ನೀರುನಾಯಿ(River Otter)ಗಳು ಮುಖ್ಯವಾಗಿ ಮುರುಗೋಡು ಮೀನುಗಳನ್ನು ಹಿಡಿದು ತಿನ್ನುತ್ತಿರುವುದರಿಂದ ಹಕ್ಕಿಗಳಿಗೆ ಇದು ವರವಾಗಿದೆ. ಈಗಾಗಲೇ ಕೆರೆಯಲ್ಲಿ ಮೀನುಗಳ ಸಂತತಿ ಅಪಾಯದ ಮಟ್ಟಕ್ಕೇರಿದೆ. ಇವುಗಳ ನಿಯಂತ್ರಣವೇ ದೊಡ್ಡ ಸವಾಲಾಗಿದ್ದ ವೇಳೆ ನೀರುನಾಯಿ(River Otter)ಗಳ ಆಗಮನ ಪಕ್ಷಿಧಾಮಕ್ಕೆ ದೊಡ್ಡ ಕೊಡುಗೆಯಾಗಿದೆ.



ಕೆರೆ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಕಂಡುಬಂದಿರುವ ನೀರುನಾಯಿ(River Otter)ಗಳನ್ನು ಪಕ್ಷಿಧಾಮದಲ್ಲೇ ಉಳಿಸಿಕೊಳ್ಳಲು ಅರಣ್ಯ ಇಲಾಖೆ ಪೂರಕ ಕ್ರಮ ಕೈಗೆತ್ತಿಕೊಳ್ಳಬೇಕು. ಕೆರೆ ನೀರನ್ನು ಸ್ವಚ್ಛವಾಗಿರಿಸಬೇಕು. ಅಲ್ಲಲ್ಲಿ ನಡುಗಡ್ಡೆ ನಿರ್ಮಿಸಬೇಕು. ಇದರ ಜೊತೆಗೆ ಕೆರೆ ಪ್ರದೇಶವನ್ನು ಪ್ಲಾಸ್ಟೀಕ್‌ ಮುಕ್ತಗೊಳಿಸಬೇಕು ಎಂದು ಸ್ಥಳೀಯರು ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.


ಅಪರೂಪದ ಅತಿಥಿಗಳಾದ ನೀರುನಾಯಿಗಳನ್ನು ಓಡಿಸುವ ಯತ್ನ ಹಲವರಿಂದ ನಡೆಯುತ್ತಿದ್ದು. ಈ ಕುರಿತಂತೆ ಅರಣ್ಯ ಇಲಾಖೆ ಕಟ್ಟೆಚ್ಚರವಹಿಸುವ ಅಗತ್ಯವಿದೆ. ನೀರುನಾಯಿ(River Otter)ಗಳನ್ನು ಸಂರಕ್ಷಿಸಿ ಕೆರೆ ಪ್ರದೇಶದಲ್ಲಿ ಉಳಿಸಿಕೊಳ್ಳಲು ಅರಣ್ಯ ಇಲಾಖೆ ಸೂಕ್ತ ನಿರ್ಧಾರ ತೆಗೆದುಕೊಳ್ಳ ಬೇಕಾಗುತ್ತದೆ. ಅರಣ್ಯ ಸಂರಕ್ಷಣೆ ಷೆಡ್ಯುಲ್‌ 1ರ ಪ್ರಕಾರ ನೀರುನಾಯಿ(River Otter)ಗಳು ಹುಲಿಯಷ್ಟೇ ಅಪರೂಪದ ಪ್ರಾಣಿಗಳಾಗಿವೆ. ನೀರುನಾಯಿಗಳನ್ನು ಬೇಟೆಯಾಡಿ ಕೊಲ್ಲುವುದು, ಅರಣ್ಯ ಸಂರಕ್ಷಣಾ ಕಾಯಿದೆ 1972ರ ಅನ್ವಯ ಹುಲಿ ಕೊಂದಷ್ಟೇ ಅಪರಾಧವೆಂದು ಪರಿಗಣಿಸಲಾಗುತ್ತದೆ.


ದೊರೆಸ್ವಾಮಿ. ಎಸ್

Comments


bottom of page