ಒಂದಿಷ್ಟು ನೆನಪು ಅವಳಿಗೆ...
- vishwa patha
- Aug 15, 2023
- 1 min read

ಒಂದಿಷ್ಟು ನೆನಪು ಅವಳಿಗೆ
ಬರದ ಹಾಗೆ ದುರುಗುಟ್ಟುತ್ತಾ ನೋಡುತ್ತಿದ್ದಾಳೆ,
ಕೋಮಾದ ಸ್ಥಿತಿಯಲಿ.
ಮದುವೆಗೆ ಅಪ್ಪ ಕೊಟ್ಟ ಧಾರೆ ಸೀರೆ
ಈಗಲೂ ಅವಳ ಕಣ್ಣಂಚಲಿ ಮಿನುಗುತ್ತಿದೆ
ಆದರೆ ಗಂಡ ಕಟ್ಟಿದ ತಾಳಿ,
ಮಕ್ಕಳಿಗೆ ತಿನ್ನಿಸಿದ ತುತ್ತು,
ಅತ್ತೆಯ ಬೈಗುಳಾ,
ಮಾವನ ವಾತ್ಸಲ್ಯ ಒಂಚೂರು ನೆನಪಿಲ್ಲ,
ಮೊದಲ ಸಂಬಳದಲಿ ತೆಗೆದ ಹಸಿರು
ಬಣ್ಣದ ಸೀರೆಯ ನೆನಪೊಂದು ಬಿಟ್ಟು..
ಇನ್ನೂ ಅವಳಿಗೆ ಮೆದುಳಿನ ಮೇಲೆ
ಹಿಡಿತ ಇಲ್ಲ, ಒಂದಿಷ್ಟು ಕಥೆಗಳಿವೆ ಅಷ್ಟೇ,
ಸೀರೆ ಕೇವಲ ಉಡುಪಲ್ಲ ಎಂದೂ,
ಹೆಣ್ತನಕ್ಕೊಂದು ಸತ್ಯತೆ ಬಿದ್ದು
ತಿಳಿದಿದ್ದ ಅವಳಿಗೆ ಅದ್ಯಾಕೋ ಟೀಷರ್ಟು
ಪ್ಯಾಂಟು ಹಿಡಿಸದೆ ಸೀರೆಯನ್ನೆ ಅಪ್ಪಿದ್ದಾಳೆ,
ದೀರ್ಘ ಉಸಿರು ನಿಲ್ಲೋವರಗೂ...
ಅಣ್ಣ ಜವಾರಿ ಸೀರೆ ತಂದು ಕೊಟ್ಟಾಗ
ಅತ್ತಿಗೆ ದೃಷ್ಟಿ ತೆಗೆದಿದ್ದಳು, ಮೊದಲ
ಬಾಣಂತಿಯ ದಿನವಾಗಿತ್ತು, ಊರಿನ ಪಾರಕ್ಕ
ಕೆಂಪು ಸೀರೆಯಲ್ಲಿಯೇ ನೇಣು ಬಿಗಿದು
ಕೊಂಡ ಅಪಶಕುನದ ಗಳಿಗೆಯೂ ಆಗಿತ್ತು,
ಆಸ್ಪತ್ರೆಯ ಐಸಿಯು ನಲ್ಲಿ ಅರೆ ಪ್ರಜ್ಞೆ ತಪ್ಪಿ
ಮಲಗಿದಾಗ ನೋಡಲು ಸೀರೆ ತೊಟ್ಟವರು
ಯಾರು ಬಂದಿರಿಲಿಲ್ಲ, ಅವಳಿಗೆ ಎಚ್ಚರವೂ ಆಗಲಿಲ್ಲ...
ಹಾಸಿಗೆಯ ಮೇಲೆ ಮಲಗಿದ್ದ ಆಕೆಗೆ
ತಾನು ಜಗತ್ತಿಗೆ ದೂರವಾಗಿದ್ದೆನೆಂದು ಅನಿಸಿಯು ಇಲ್ಲ,
ತನ್ನ ಅಡಿಗೆ ಮನೆಯ ಒಗ್ಗರಣೆ ಘಮ್ಮೆಂದು
ಮೂಗಿಗೆ ಬಡಿದರೂ ಆಕೆ ಕೈ ಆಡಿಸದ
ಕೊರಗಲ್ಲೇ, ನರ್ಸ್ ಹುಟ್ಟಿದ ಬಿಳಿ ಸೀರೆ ನೋಡಿ
ಕಣ್ಣಿಂದ ಒಂದ್ಹನಿ ಗಲ್ಲದಿಂದ ಕೆಳಗೆ ಜಾರಿ
ಬಿತ್ತು, ಪಕ್ಕದಲ್ಲಿ ಚೂಡಿದಾರ ಧರಿಸಿ ಕುಳಿತಿದ್ದ
ಮಗಳ ಮುಖವನ್ನೊಮ್ಮೆ ಗಾಢವಾಗಿ ಗಮನಿಸಿ
ಹಾಗೆಯೆ ಕಣ್ಮುಚ್ಚಿದಳು, ತಾನುಟ್ಟ ಹಳದಿ ಸೀರೆಯಲ್ಲೆ...
Comments