top of page
Writer's picturevishwa patha

ಡಾಕ್ಟರ್ ಓದಿದವರು ಇನ್ನೂ ಮೌಡ್ಯ ಬಿಟ್ಟಿಲ್ಲ: ಸಿದ್ದರಾಮಯ್ಯ

ಬೆಂಗಳೂರು, ಜೂನ್ 19: ವಿದ್ಯಾವಂತರಲ್ಲೇ ಜಾತಿಪ್ರಜ್ಞೆ ಹೆಚ್ಚಾಗುತ್ತಿದೆ. ಡಾಕ್ಟರ್ ಓದಿದವರು ಇನ್ನೂ ಮೌಡ್ಯ ಬಿಟ್ಟಿಲ್ಲ. ಓದಿದವರೇ ಇನ್ನೂ ಹಣೆಬರಹದಲ್ಲಿ, ಕರ್ಮ ಸಿದ್ಧಾಂತದಲ್ಲಿ ನಂಬಿಕೆ ಇಟ್ಟುಕೊಂಡಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳು ಇಂಥಾ ಮೌಡ್ಯದಲ್ಲಿ ನಂಬಿಕೆ ಇಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.



ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಸಂಯುಕ್ತಾಶ್ರಯದಲ್ಲಿ SSLC ಮತ್ತು PUC ಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಉತ್ತೇಜಿಸಿ ಮಾತನಾಡಿದ ಅವರು, ದಲಿತ ಸಂಘರ್ಷ ಸಮಿತಿ ರಾಜ್ಯದಲ್ಲಿ ನಡೆಸಿದ, "ನಮಗೆ ಸರಾಯಿ ಅಂಗಡಿ ಬೇಡ. ವಸತಿ ಶಾಲೆ ಬೇಕು" ಎನ್ನುವ ಹೋರಾಟದಿಂದ ಪ್ರೇರಿತನಾಗಿ ಮೊದಲ ಬಜೆಟ್ ಮಂಡಿಸುವ ವೇಳೆ ಗ್ರಾಮೀಣ ಭಾಗದಲ್ಲಿ ಮೊರಾರ್ಜಿ ಶಾಲೆಗಳನ್ನು ಆರಂಭಿಸಿದೆ.


ಅವತ್ತಿನಿಂದ ನಿರಂತರವಾಗಿ ಮೊರಾರ್ಜಿ ವಸತಿ ಶಾಲೆಗಳನ್ನು ತೆರೆಯುತ್ತಲೇ ಇದ್ದೇನೆ. ಸದ್ಯ ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ 833 ವಸತಿ ಶಾಲೆಗಳಿವೆ. ಅಲ್ಪ ಸಂಖ್ಯಾತ ಇಲಾಖೆಯಡಿಯಲ್ಲಿರುವುದೂ ಸೇರಿ ಒಟ್ಟು 946 ವಸತಿ ಶಾಲೆಗಳಿವೆ ಎಂದು ವಿವರಿಸಿದರು. ಕೆಲವು ಹೋಬಳಿಯಲ್ಲಿ ಒಂದಕ್ಕಿಂತ ಹೆಚ್ಚು ವಸತಿ ಶಾಲೆಗಳಿವೆ. ಆದ್ದರಿಂದ ಕೆಲವು ಹೋಬಳಿಗಳಲ್ಲಿ ಇಲ್ಲವಾಗಿತ್ತು. ಹೀಗಾಗಿ ಈ ವರ್ಷ 20 ವಸತಿ ಶಾಲೆಗಳನ್ನು ಆರಂಭಿಸಲು ಅನುಮತಿ ನೀಡಿದ್ದೇನೆ. ಹೋಬಳಿಗೊಂದು ವಸತಿ ಶಾಲೆ ನನ್ನ ಗುರಿ ಮತ್ತು ಉದ್ದೇಶವಾಗಿದೆ ಎಂದರು.


ಗ್ರಾಮೀಣ ಭಾಗದಲ್ಲಿ ಸರ್ವರಿಗೂ ಗುಣಮಟ್ಟದ ವೈಚಾರಿಕತೆ, ವೈಜ್ಞಾನಿಕತೆಯಿಂದ ಕೂಡಿದ ಶಿಕ್ಷಣ ದೊರೆಯಬೇಕು. ಜಾತಿ ವ್ಯವಸ್ಥೆ ಕಾರಣದಿಂದ ಸಮಾಜದಲ್ಲಿ ಅಸಮಾನತೆ ಸೃಷ್ಟಿಯಾಗಿದೆ ಎಲ್ಲಾ ಜಾತಿ, ಜನವರ್ಗದ ಮಕ್ಕಳಿಗೆ ಓದುವ ಅವಕಾಶ ಕಲ್ಪಿಸಿದ್ದು ನಮ್ಮ ಸಂವಿಧಾನ ಎಂದರು. ಜಾತಿ ವ್ಯವಸ್ಥೆ ಕಾರಣದಿಂದ ಸಮಾಜದಲ್ಲಿ ಅಸಮಾನತೆ ಸೃಷ್ಟಿಯಾಗಿದೆ.‌ ಇದನ್ನು ಹೋಗಲಾಡಿಸಬೇಕಾಗಿದೆ. ನನಗೆ ಶಿಕ್ಷಣ ಸಿಕ್ಕಿದ್ದರಿಂದಲೇ ಮುಖ್ಯಮಂತ್ರಿ ಆಗುವ ಅವಕಾಶ ದೊರೆಯಿತು. ಇಲ್ಲದಿದ್ದರೆ ನಾನೂ ಎಮ್ಮೆ, ಹಸು ಮೇಯಿಸುತ್ತಾ ಅಷ್ಟಕ್ಕೇ ಸೀಮಿತ ಆಗಬೇಕಾಗಿತ್ತು ಎಂದರು.

Comments


bottom of page