top of page

ನಾ ನಿನ್ನ ಧ್ಯಾನದೊಳಿರಲು

  • Writer: vishwa patha
    vishwa patha
  • Aug 14, 2023
  • 8 min read

ಹ್ಯಾದ್ರಿ ಕಾಲೇಜ್, ಬೈ ಪಾಸ್ ಇಳಿಯೋರು ಯಾರಾದ್ರೂ ಇದ್ರೆ ಇಲ್ಲೇ ಇಳ್ಕೊಳ್ರಿ. ಬಸ್ ಸಿಟಿ ಒಳಗೆ ಹೋಗಲ್ಲ, ಕಾಲೇಜ್ ಬಿಟ್ರೆ ಬಸ್ ಸ್ಟಾಂಡ್ ಎಂದು ಒಂದೇ ಸಮನೇ ಕೂಗಿಕೊಳ್ಳುತ್ತಿದ್ದ ಕಂಡಕ್ಟರ್ ಜೋರು ಧ್ವನಿಗೆ ಓದುತ್ತಿದ್ದ ಪುಸ್ತಕವನ್ನು ಮಡಚಿ ಕೈನಲ್ಲಿಟ್ಟುಕೊಂಡು ಕೆಳಗಿಳಿದೆ. ಕಂಡಕ್ಟರ್ ಮತ್ತದೇ ಜೋರು ಧ್ವನಿಯಲ್ಲಿ ರೈಟ್-ರೈಟ್ ಎನ್ನುತ್ತಿದ್ದಂತೆ ಬಸ್ ವೇಗವಾಗಿ ಮುಂದೆ ಚಲಿಸಿತು. 



ಬಹುಶಃ ಇದೇ ಮೊದಲ ಬಾರಿಗೆ ಹೀಗೆ ಒಬ್ಬಳೇ ಶಿವಮೊಗ್ಗಕ್ಕೆ ಬಂದಿರುವುದು, ಅದು ಕೂಡ ಓದುವ ಸಲುವಾಗಿ. ಈ ಹಿಂದೆ ಅಪ್ಪ ಅಮ್ಮನೊಂದಿಗೆ ಅಜ್ಜಿಯ ಊರಿಗೆ ಹೋಗಲು ಒಂದೆರಡು ಬಾರಿ ಇಲ್ಲಿಗೆ ಬಂದಿರಬಹುದೇನೋ?, ಅಷ್ಟಾಗಿ ನೆನಪಿಲ್ಲ. ಕನಸಿನ ಬೆನ್ನೇರಿ ಹೊರಟ ಮೊದಲ ಒಬ್ಬಂಟಿ ಯಾನ ನನ್ನ ಜೀವನದ ದಿಕ್ಕನ್ನೇ ಬದಲಿಸಿ ಬಿಡುತ್ತದೆ ಎನ್ನುವ ಯಾವ ಕಲ್ಪನೆಯೂ ಆಗ ನನಗಿರಲಿಲ್ಲ. ಅಪ್ಪನಿಗಿದ್ದ ಶಿಕ್ಷಣದ ಮೇಲಿನ ಅತೀವ ಒಲವಿನಿಂದಾಗಿ ನಮ್ಮ ಕುಟುಂಬದಲ್ಲಿ ಮಾತ್ರವಲ್ಲ, ಇಡೀ ಊರಿನಲ್ಲೇ ಮೊದಲ ಬಾರಿಗೆ ಹೆಣ್ಣು ಮಗಳೊಬ್ಬಳು ಆಧುನಿಕತೆಗೆ ಒಳಗಾಗದೆ, ಪ್ರಕೃತಿಯ ಹಸಿರು ಸಿರಿಯ ನಡುವೆ ಸ್ವಚ್ಛಂದವಾಗಿ ನಲಿಯುತ್ತಿದ್ದ ಒಂದು ಪುಟ್ಟ ಹಳ್ಳಿಯಿಂದ ದೂರದ ಶಿವಮೊಗ್ಗಕ್ಕೆ ಓದಲು ಹೋಗುತ್ತಿರುವುದು ಎನ್ನುವ ಪುಟ್ಟ ಪ್ರಶಂಸೆಯ ಮಾತು ಸಹ ನನ್ನ ಹೆಗಲೇರಿತ್ತು. ಜೊತೆಗೆ ಸಾಕಷ್ಟು ಜವಾಬ್ದಾರಿಗಳು ಕೂಡ.


ಅದು ಡಿಗ್ರಿ ಕಾಲೇಜಿನ ಮೊದಲ ದಿನ. ರ್ಯಾಗಿಂಗ್ ನಾ ಭಯವಿಲ್ಲದೇ ಹೋದರೂ ಅದ್ಯಾವುದೋ ಅವ್ಯಕ್ತ ಭಾವವೊಂದು ಬೆಚ್ಚಗೆ ಹೃದಯದಲ್ಲಿ ಮನೆಮಾಡಿತ್ತು. ಅಂಜಿಕೆಯಿಂದಲೇ ನಿಧಾನವಾಗಿ ಒಂದೊಂದೇ ಹೆಜ್ಜೆಗಳನ್ನಿಡುತ್ತಾ ನಡೆದು ಹೋಗುತ್ತಿದ್ದವಳ ಪಕ್ಕದಲ್ಲಿ ಯಾರೋ ಜೋರಾಗಿ ಬೈಕ್ ಹಾರನ್ ಮಾಡುತ್ತಾ ಮುಂದೆ ಸಾಗಿದರು. ಹಳ್ಳಿಯಲ್ಲಿ ಹುಟ್ಟಿ ಬೆಳೆದ ನನಗೆ ಇದೆಲ್ಲವೂ ಹೊಸತು. ಮುಂಚೆ ಎಂದಾದರೂ ಈ ರೀತಿಯ ಕರ್ಕಶ ಬೈಕ್ ಹಾರನ್ಗಳನ್ನು ಕೇಳಿದ್ದರೆ ಅಲ್ಲವೇ?. ಆ ಹಾರನ್ ಶಬ್ದಕ್ಕೆ ಬೆಚ್ಚಿದವಳ ಕೈ ಜಾರಿದ ಪುಸ್ತಕ ಭುವಿ ಸೇರಿತು. ಅದಾಗಲೇ ಕೈಕಾಲುಗಳು ಸಣ್ಣದಾಗಿ ನಡುಗಲು ಶುರುವಾಗಿದ್ದವು. ಮೊದಲೇ ಮನೆಮಾಡಿದ್ದ ಅವ್ಯಕ್ತ ಭಾವವೊಂದು ನಿಧಾನವಾಗಿ ಭಯದ ರೂಪ ಪಡೆಯತೊಡಗಿತು. ಒಂದು ಹೆಜ್ಜೆ ಮುಂದಿಡಲು ಸಹಕರಿಸದಂತೆ ಕಾಲುಗಳು ನಿಂತಲ್ಲೇ ಮುಷ್ಕರ ಹೂಡಿದ್ದವು. ಕಾಲೇಜ್ಗೆ ಹೋಗುವುದೇ ಬೇಡ ಈಗಲೇ ಮನೆಗೆ ವಾಪಾಸ್ ಹೋಗಿ ಬಿಡಲೇ?, ಎಂದು ಯೋಚಿಸುತ್ತಿದ್ದವಳ ಪಕ್ಕದಲ್ಲಿ ಮತ್ತದೆ ಬೈಕಿನ ಹಾರನ್ ಶಬ್ದ ಕೇಳಿಸಿತು. ನೋಡಲೋ?, ಬೇಡವೋ?, ಎಂದು ಯೋಚಿಸುತ್ತಲೇ ತಿರುಗಿ ನೋಡಿದೆ. ಸುಂದರ ನೀಲಿ ಕಂಗಳ ಚೆಲುವನೊಬ್ಬ ಬೈಕಿನಿಂದಿಳಿದು ಬಂದವ ಕೆಳಗೆ ಬಿದ್ದಿದ್ದ ಪುಸ್ತಕವನ್ನು ನನ್ನ ಕೈ ಮೇಲಿಟ್ಟು ಅಷ್ಟೊಂದು ಹೆದರುವ ಅವಶ್ಯಕತೆಯಿಲ್ಲ ಮೈ ಲವ್.... ನಾನು ನಿನ್ನೊಂದಿಗಿರುವವರೆಗೂ ಯಾರೂ ಸಹ ನಿನ್ನ ನೆರಳನ್ನೂ ಸೋಕಲಾರರು ಎಂದು ಒಮ್ಮೆಲೇ ನುಡಿದು, ಅವ ಏನು ಹೇಳಿದ ಎನ್ನುವುದನ್ನು ನಾನು ನನ್ನ ಮನಸ್ಸಿಗೆ ಅಲ್ಲಲ್ಲ, ಮೆದುಳಿಗೆ ತಲುಪಿಸುವಷ್ಟರಲ್ಲಿ ಕಂಡೂ ಕಾಣದಂತೆ ಪುಟ್ಟದಾಗಿ ಕಣ್ಣು ಹೊಡೆದು ಬಂದಷ್ಟೇ ವೇಗವಾಗಿ ಅಲ್ಲಿಂದ ಹೊರಟು ಹೋಗಿದ್ದ.


ಅವನ ಆ ಮಾತುಗಳು ಮನದ ಮೂಲೆಯಲ್ಲೆಲ್ಲೋ ಬೆಚ್ಚಗೆ ಕುಳಿತು ಬಿಟ್ಟವು. ಹೆಲ್ಮೆಟ್ ಹಾಕಿದ್ದರಿಂದ ಅವನ ಮುಖ ಸರಿಯಾಗಿ ಕಾಣಲಿಲ್ಲವಾದರೂ ಅವನ ಕಣ್ಣುಗಳು ಮಾತ್ರ ನನ್ನನ್ನು ಇನ್ನಿಲ್ಲದಂತೆ ಅವನತ್ತ ಆಕರ್ಷಸಿದ್ದವು. ಅವನ ಮಿಂಚಿನ ನೀಲಿ ಕಂಗಳು ಏನೋ ಹೇಳುತ್ತಿದ್ದವು. ಭಯದಲ್ಲೇ ಇದ್ದವಳಿಗೆ ಅವನ ಮಾತಿನ ಒಳಾರ್ಥ ಅರಿವಾಗಲೇ ಇಲ್ಲ. ಅವನೇಳಿದ ಮಾತುಗಳೇ ಪದೇ ಪದೇ ಕಿವಿಯಲ್ಲಿ ಮಾರ್ದನಿಸತೊಡಗಿದವು. ಅವನ ಕಣ್ಣಿನ ಭಾಷೆ ಅರಿಯುವಲ್ಲಿ ಮನ ಸಂಪೂರ್ಣವಾಗಿ ಸೋತುಹೋಗಿತ್ತು. ಅವನ ಮಾತುಗಳಿಗೆ, ಅವನ ಕಣ್ಣಿನಲ್ಲಿದ್ದ ನಿಷ್ಕಲ್ಮಶ ಒಲವಿಗೆ ನನ್ನ ಮನ ಅದಾಗಲೇ ಶರಣಾಗಿತ್ತು. ಇಷ್ಟೊತ್ತು ನನ್ನನ್ನು ಆವರಿಸಿದ್ದ ಭಯ ಕಡಿಮೆಯಾಗುತ್ತಲೇ ಮತ್ತೆ ನಿಧಾನವಾಗಿ ಹೆಜ್ಜೆಗಳನ್ನಿಡುತ್ತಾ ಮುಂದೆ ಸಾಗಿದೆ.


ಸುತ್ತಲೂ ಹಸಿರು ಸಿರಿಯ ನಡುವೆ ಬೃಹದಾಕಾರವಾಗಿ ಎದ್ದು ನಿಂತಿದ್ದ ಸಹ್ಯಾದ್ರಿ ಕಾಲೇಜಿನ ಕಟ್ಟಡ, ವ್ಯವಸ್ಥಿತವಾಗಿ ನಿರ್ಮಾಣಗೊಂಡಿತ್ತು. ಅಲ್ಲಲ್ಲಿ ಗುಂಪು ಕಟ್ಟಿಕೊಂಡಿರುವ ಸೀನಿಯರ್ಸ್ಗಳು, ನನ್ನಂತೆಯೇ ನೂರಾರು ಕನಸುಗಳನ್ನು ಹೊತ್ತುಕೊಂಡು ನನ್ನೊಂದಿಗೆ ಸಹ ಪಯಣಿಸುತ್ತಿರುವ ಜೂನಿಯರ್ಸ್ಗಳು, ತಮ್ಮಿಷ್ಟದಂತೆ ರೆಕ್ಕೆ ಬಿಚ್ಚಿ ಹಾರಾಡುತ್ತಿರುವ ಹಕ್ಕಿಗಳ ಬಳಗ, ಮನಸ್ಸಿಗೆ ಮುದ ನೀಡುತ್ತಿರುವ ತಂಗಾಳಿ, ಅದೇಕೋ ಅಲ್ಲಿನ ವಾತಾವರಣವೇ ಮನಸಿಗೆ ಬಹಳ ಇಷ್ಟವಾಗಿಬಿಟ್ಟಿತು. ಅಷ್ಟು ದೊಡ್ಡ ಕಾಲೇಜಿನಲ್ಲಿ ಹೇಗೋ ಕಷ್ಟ ಪಟ್ಟು, ಅವರಿವರ ಬಳಿ ಕೇಳಿಕೊಂಡು ನನ್ನ ಕ್ಲಾಸ್ ರೂಮ್ ತಲುಪಿದೆ. ಥರ್ಡ್ ಫ್ಲೋರಿನಲ್ಲಿ ನಮ್ಮ ತರಗತಿ ಇದ್ದಿದ್ದರಿಂದಲೋ?,  ಸಮಯವಾಗಿತ್ತೆಂದು ಓಡುವ ನಡಿಗೆಯಲ್ಲಿ ಬಂದಿದ್ದಕ್ಕೋ ಏನೋ? ತುಸು ಹೆಚ್ಚೇ ಆಯಾಸವಾಗಿತ್ತು. ಜೊತೆಗೆ ಬಾಯಾರಿಕೆ ಬೇರೆ. ನೀರಡಿಕೆ ಹೋಗಲಾಡಿಸಲು ನೀರಿನ ಬಾಟಲ್ ಗಾಗಿ ಬ್ಯಾಗ್ ಪೂರ್ತಿ ಜಾಲಾಡಿದೆ. ಆದರೆ ಬಾಟಲಿಯ ಸುಳಿವು ಮಾತ್ರ ಸಿಗಲಿಲ್ಲ.


ಬಸ್ಗೆ ಟೈಮ್ ಆಯಿತೆಂದು ಅರ್ಜೆಂಟ್ನಲ್ಲಿಯೇ ಹೊರಟವಳು ಲಂಚ್ ಬಾಕ್ಸ್ ಜೊತೆಗೆ ನೀರಿನ ಬಾಟಲಿಯನ್ನು ಸಹ ಮರೆತು ಬಂದಿದ್ದಕ್ಕಾಗಿ ನನ್ನ ತಲೆಗೆ ನಾನೇ ಸಣ್ಣದಾಗಿ ಮೊಟಕಿಕೊಂಡೆ. ಇಲ್ಲವಾದರೆ ಏಟು ಬೀಳುವುದು ನನ್ನ ತಲೆಗೆ ಅಲ್ಲವೇ?. 😜ಇದ್ದಕ್ಕಿದಂತೆ ಯಾರೋ ನನ್ನ ಮುಂದೆ ನೀರಿನ ಬಾಟಲಿಯನ್ನು ಹಿಡಿದಂತಾಯಿತು. ಅತಿಯಾದ ಬಾಯಾರಿಕೆಯಿಂದಾಗಿ ಅದ್ಯಾರು ಎನ್ನುವುದನ್ನು ಸಹ ನೋಡದೆ ಬಾಟಲನ್ನು ಪಡೆದವಳು ಗಟಗಟ ಎಂದು ಒಂದೇ ಬಾರಿಗೆ ಅಷ್ಟೂ ನೀರನ್ನು ಕುಡಿದು ಮುಗಿಸಿದೆ. ಸ್ವಲ್ಪ ಸಮಾಧಾನವಾಯಿತು. ಅಯ್ಯೋ... ಪೂರ್ತಿ ನೀರನ್ನು ನಾನೇ ಖಾಲಿ ಮಾಡಿಬಿಟ್ಟೆ, ಅವರಿಗಾಗಿ ಒಂದು ಹನಿಯನ್ನೂ ಉಳಿಸಲಿಲ್ಲವಲ್ಲಾ ಎನ್ನುವುದು ನೆನಪಾಗುತ್ತಲೇ ಪೆಚ್ಚು ಮುಖ ಮಾಡಿಕೊಂಡು ಸಾರೀ ಕೇಳಲು ಅವರತ್ತ ನೋಡಿದೆ. ಮತ್ತದೇ ಹೆಲ್ಮೆಟ್ ಹುಡುಗ ಬೆಂಚಿಗೊರಗಿ, ಕೈಕಟ್ಟಿಕೊಂಡು ನನ್ನನ್ನೇ ನೋಡುತ್ತಾ ನಿಂತಿದ್ದ. ಒಂದು ಕ್ಷಣ ಆತಂಕವಾದರೂ ನನ್ನನ್ನು ನಾನು ಸಂಬಾಳಿಸಿಕೊಂಡು ಸಾರೀ ಎಂದು ಹೇಳಲು ಬಾಯಿ ತೆರೆಯುವ ಮುನ್ನವೇ ಮಾತಾಡಿದವ, "ಬರುವುದೇ ದೂರದ ಹಳ್ಳಿಯಿಂದ, ಸಾಲದು ಎನ್ನುವಂತೆ ನಿಮಿಷಕ್ಕೊಂದು ಬಸ್ ಇದ್ದರೂ, ಹೀಗೆ ಗಡಿಬಿಡಿ ಮಾಡಿಕೊಂಡು ಲಂಚ್ ಬಾಕ್ಸ್, ನೀರಿನ ಬಾಟಲ್ ಎಲ್ಲವನ್ನು ಬಿಟ್ಟು ಬರುವ ಬದಲು, ನಿಧಾನವಾಗಿ ಎಲ್ಲವನ್ನೂ ಎತ್ತಿಟ್ಟುಕೊಂಡೇ ಕಾಲೇಜಿಗೆ ಬರಬಹುದಲ್ಲಾ?. ಪಾಪ ಅಮ್ಮ ನಿನಗಿಂತ ಮುಂಚೆಯೇ ಎದ್ದು, ಮಗಳು ಉಪವಾಸ ಹೋಗಬಾರದು ಎನ್ನುವ ಕಾರಣಕ್ಕಾಗಿ ಮನೆಯ ಇತರೆ ಕೆಲಸಗಳನ್ನು ಮಾಡುವುದನ್ನು ಬಿಟ್ಟು, ನಿನಗಾಗಿ ತಿಂಡಿ ಮಾಡಿ, ಡಬ್ಬಿಗೆ ಹಾಕಿಕೊಟ್ಟರೆ.. ನೀನು ಹೀಗೆ ಗಡಿಬಿಡಿ ಮಾಡಿಕೊಂಡು ಮರೆತು ಬರುವುದು ಎಷ್ಟು ಸರಿ?. ಇದೇ ಕೊನೆ ಮತ್ತೆ ಇದು ರಿಪೀಟ್ ಆದರೆ ನಾನಂತೂ ಸುಮ್ಮನೆ ಇರುವುದಿಲ್ಲ" ಎಂದು ಕೋಪದಿಂದ ನುಡಿದವನ ಮಾತುಗಳನ್ನು ಕೇಳಿ ಕಣ್ಣುಗಳು ಹನಿಗೂಡಿದ್ದವು.


ನನ್ನ ಕಣ್ಣೀರನ್ನು ನೋಡಿದವನ ಮಾತಿನ ವರಸೆ ಸ್ವಲ್ಪ ಬದಲಾಗಿತ್ತು. ಮಾತುಗಳು ಹತ್ತಿಯಂತೆ ಮೃದುವಾಗತೊಡಗಿದವು. "ನೋಡಮ್ಮ ಈ ಬಾಟಲ್ ನಿನಗಾಗಿಯೇ ತಂದಿದ್ದು, ಜೊತೆಗೆ ಇದು ತಿಂಡಿ ಬಾಕ್ಸ್ ನಾನೇ ನನ್ನ ಕೈಯಾರೆ ಮಾಡಿರುವುದು ಟೇಸ್ಟ್ ಮಾಡಿ ಹೇಳು" ಎಂದವ ತಿಂಡಿ ಬಾಕ್ಸ್ ಅನ್ನು ನನ್ನ ಬ್ಯಾಗಿನಲ್ಲಿಟ್ಟು ಮತ್ತೊಮ್ಮೆ ಕಣ್ಣು ಹೊಡೆದು ಕಣ್ಮರೆಯಾಗಿದ್ದ. ಇವನ ಆ ಚರ್ಯೆಗೆ ಹಣೆ ಚಚ್ಚಿಕೊಳ್ಳುವಂತಾಗಿತ್ತು ನನ್ನ ಪರಿಸ್ಥಿತಿ. ಯಾರಾದರೂ ನೋಡಿದರೆ?... ಏನೆಂದುಕೊಳ್ಳುವುದಿಲ್ಲ?... ಎಂದು ಸುತ್ತಲೂ ನೋಡಿದೆ ಯಾರಾದರೂ ನಮ್ಮನ್ನೇ ನೋಡುತ್ತಿದ್ದಾರಾ ಹೇಗೆ ಎಂದು. ಇಲ್ಲ, ಎಲ್ಲರೂ ಅವರವರದ್ದೇ ಲೋಕದಲ್ಲಿ ಕಳೆದು ಹೋಗಿದ್ದರು. ನನಗಂತೂ ಇವನು ಯಾರು?, ನನ್ನ ಬಗ್ಗೆ ಇವನಿಗೆ ಎಲ್ಲಾ ಗೊತ್ತಿರಲು ಹೇಗೆ ಸಾಧ್ಯ?, ಇವನು ಕೂಡ ನನ್ನ ತರಗತಿನಾ?, ಅಥವಾ ಇವನು ನಮ್ಮ ಸೀನಿಯರ್ ಆಗಿರಬಹುದಾ?,  ಇವನು ನಮ್ಮ ಊರಿನವನಾ?,  ಅಥವಾ ನನ್ನ ದೂರದ ಸಂಬಂಧಿಕನಾ?, ಒಂದು ವೇಳೆ ಇವನು ನಮ್ಮ ಊರಿನವನೋ?, ಅಥವಾ ಸಂಬಂಧಿಕನೋ?, ಆಗಿದ್ದರೆ ನಾನು ಇವನನ್ನು ಒಮ್ಮೆಯಾದರೂ ನೋಡಿರಬೇಕೆಲ್ಲವೇ?. ಆದರೆ ನನಗಂತೂ ಇವನನ್ನು ಈ ಮುಂಚೆ ನೋಡಿದ ನೆನಪು ಸಹ ಇಲ್ಲ. ಆಗಿದ್ದರೆ ಯಾರಿವನು?... ಅಪ್ಪ ಅಮ್ಮನೇ ಇಲ್ಲಿವರೆಗೂ ನಂಗೆ ಒಂದು ಮಾತು ಬೈದಿರಲಿಲ್ಲ. ಅಂತದರಲ್ಲಿ ಇವನ್ಯಾರು ನಂಗೆ ಬೈತಾನೆ ಗೂಬೆ ಮುಖದೋನು. ಆದರೂ ನನ್ನ ಮೇಲೆ ಇವನಿಗೇಕೆ ಇಷ್ಟೊಂದು ಕಾಳಜಿ?, ಉಫ್ ಮನಸ್ಸಿನ ತುಂಬಾ ಇಂತಹ ಪ್ರಶ್ನೆಗಳೇ. ಆದರೆ ಒಂದಕ್ಕೂ ಉತ್ತರ ಗೊತ್ತಿಲ್ಲ ಎನ್ನುವುದೇ ವಿಪರ್ಯಾಸ. ಮನಸಿನಲ್ಲಿ ಮಂಥನ ನಡೆಸುತ್ತಿದ್ದ ಯೋಚನೆಗಳ ದಾಳಿಗೆ ಸಿಲುಕಿ ಲೋಕವನ್ನೇ ಮರೆತ್ತಿದ್ದವಳನ್ನು ಎಚ್ಚರಿಸಿದ್ದು "ಹಾಯ್ ನನ್ ಹೆಸ್ರು ಪ್ರಕೃತಿ ಅಂತ ನಿಮ್ಮ ಹೆಸರು?", ಎಂದು ಮುದ್ದಾಗಿ ಕೇಳಿದ ಹುಡುಗಿಯ ಧ್ವನಿ. "ಹಲೋ ನನ್ ಹೆಸ್ರು ಕನಸು" ಎಂದವಳೇ ಒಂದು ಪರಿಚಯದ ಕಿರುನಗೆ ಬೀರಿದೆ. ಕಡಿಮೆ ಅವಧಿಯಲ್ಲೇ ಸಾಕಷ್ಟು ವಿಷಯಗಳು ನಮ್ಮ ನಡುವೆ ವಿನಿಮಯವಾದವು. ಅಷ್ಟೇ ಬೇಗ ನನಗೆ ಅವಳು ಅತಿ ಆತ್ಮೀಯಳು ಆಗಿಬಿಟ್ಟಳು.


ಅಪ್ಪನ ಆಸೆಯಂತೆ ಆರಿಸಿಕೊಂಡಿದ್ದು ಇಂಗ್ಲಿಷ್ ಲಿಟರೇಚರ್ ಆಗಿದ್ದರಿಂದ ಅಂದು ನಮಗೆ ಮೊದಲ ಕ್ಲಾಸ್ ತೆಗದುಕೊಂಡಿದ್ದು ಇಂಗ್ಲಿಷ್ ಡಿಪಾರ್ಟ್ಮೆಂಟಿನ HOD. ಅದುವೇ ಮೊದಲ ಕ್ಲಾಸ್ ಆಗಿದ್ದರಿಂದ ಎಲ್ಲರು ತಮ್ಮ ತಮ್ಮ ಪರಿಚಯ ಮಾಡಿಕೊಂಡರು. ಅಂದಿನ ಅಷ್ಟು ತರಗತಿಗಳು ಪರಸ್ಪರ ಪರಿಚಯ ಮಾಡಿಕೊಳ್ಳುವುದಕ್ಕೆ ಮೀಸಲಾಗಿದ್ದವು. ತರಗತಿಗಳೆಲ್ಲವೂ ಮುಗಿದು ಇನ್ನೇನು ಮನೆಗೆ ಹೊರಡಬೇಕು ಎನ್ನುವ ಸಮಯದಿ ನನ್ನ ಕಣ್ಣುಗಳು ನನಗರಿವಿಲ್ಲದೆ ಸುತ್ತಲೂ ಒಮ್ಮೆ ಕಾಡುವ ನೀಲಿ ಕಣ್ಣಿನ ಹುಡುಗನಿಗಾಗಿ ಹುಡುಕಾಟ ಶುರುಮಾಡಿದವು. ಅವನು ಬೆಳಿಗ್ಗೆ ಕೊಟ್ಟು ಹೋಗಿದ್ದ ತಿಂಡಿಯ ಬಾಕ್ಸ್ ಜೊತೆಗೆ ತಿಂಡಿಯೂ ಹಾಗೆಯೇ ಉಳಿದಿತ್ತು. ಕಾಲೇಜಿನ ಮೊದಲ ದಿನವಾಗಿದ್ದರಿಂದ ಪ್ರಕೃತಿಯ ಜೊತೆ ಸೇರಿ ಕ್ಯಾಂಟೀನ್ ಹೊಕ್ಕವಳು ನನ್ನಿಷ್ಟದ ಐಸ್ಕ್ರೀಂ ಬೇರೆ ತಿಂದಿದ್ದರಿಂದ ಹೊಟ್ಟೆ ಫುಲ್ ಆಗಿತ್ತು. ಅವನು ಕೊಟ್ಟಿದ್ದ ತಿಂಡಿಯ ಬಾಕ್ಸ್ ಆಗ ನನಗೆ ನೆನಪಾಗಲೇ ಇಲ್ಲ. ಅಲ್ಲೇ ಕಟ್ಟೆಯ ಮೇಲೆ ಕುಳಿತವಳು ಪ್ರಕೃತಿಗೂ ಕುಳಿತುಕೊಳ್ಳಲು ತಿಳಿಸಿ ಬಾಕ್ಸ್ ಓಪನ್ ಮಾಡಿದೆ. ತಿಂಡಿಯನ್ನು ನೋಡುತ್ತಲೇ ನನ್ನ ಮುಖ ಸಪ್ಪೆಯಾಗಿಬಿಟ್ಟಿತು. ಬಹುಶಃ ತಿಂಡಿಗಳಲ್ಲೇ ನನ್ನ ಆಜನ್ಮ ಶತ್ರು ಎಂದು ಯಾವುದನ್ನಾದರೂ ಕರೆಯುತ್ತೇನೆ, ದ್ವೇಷಿಸುತ್ತೇನೆ ಎಂದರೆ ಅದು ಕೇವಲ ಪಲಾವನ್ನು ಮಾತ್ರ. ತರಕಾರಿ ಎಂದರೆ ಮೊದಲೇ ಅಲರ್ಜಿ ಬೇರೆ. ಇನ್ನೂ ನನ್ನಿಂದ ಇದನ್ನು ತಿನ್ನಲಾಗದು ಎಂದು ಮುಚ್ಚಿಡಲು ಹೊರಟವಳಿಗೆ ಮುಂಜಾನೆ ಅವನು ಹೇಳಿದ ಮಾತುಗಳು ನೆನಪಾದವು. ತರಕಾರಿಯನ್ನೆಲ್ಲಾ ಒಂದು ಕಡೆ ಒಟ್ಟು ಮಾಡಿ ಬರೀ ಅನ್ನವನ್ನೇ ತೆಗದುಕೊಂಡು ಒಂದು ತುತ್ತು ಬಾಯಲ್ಲಿಟ್ಟುಕೊಂಡೆ. ವಾವ್ ಎಂದು ಮನಸ್ಸು ತನ್ನಷ್ಟಕ್ಕೆ ತಾನೇ ಉಸುರಿತು. ಪ್ರಕೃತಿಗೂ ಟೇಸ್ಟ್ ಮಾಡಲು ಹೇಳಿದೆ. ಅವಳು ಸಹ "ತಿಂಡಿ ತುಂಬಾ ಚೆನ್ನಾಗಿದೆ ಕಣೇ ಇನ್ಮೇಲೆ ವಾರಕ್ಕೆ ಒಮ್ಮೆಯಾದರೂ ಪಲಾವ್ ಮಾಡಿಸಿಕೊಂಡು ಬಾ" ಎಂದಾಗ ಏನು ಹೇಳಬೇಕೆಂದು ತೋಚದೆ ಸುಮ್ಮನೆ ತಲೆಯಾಡಿಸಿದೆ.


ಅಮ್ಮನ ಕೈ ರುಚಿಯ ನಂತರ ಮೊದಲ ಬಾರಿಗೆ ಮನಸ್ಸಿಗೆ, ನಾಲಿಗೆಗೆ ತುಂಬಾ ಹಿಡಿಸಿದ್ದು ಇವರ ಕೈ ರುಚಿಯೇ. ಅವರಿಗೆ ಅವರ ಬಾಕ್ಸ್ ಅನ್ನು ಮರಳಿಸಿ, ಒಂದು ಧನ್ಯವಾದ ಹೇಳಲೆಂದು ಬಸ್ಟ್ಯಾಂಡ್ ತಲುಪುವವರೆಗೂ ಅವರಿಗಾಗಿ ಹುಡುಕಾಡಿದೆ. ಆದರೆ ಎಲ್ಲೂ ಅವರ ಸುಳಿವು ಸಿಗಲಿಲ್ಲ. ಅದೇ ಸಮಯಕ್ಕೆ ಸರಿಯಾಗಿ ಬಸ್ ಬಂದಿತು. ಇಷ್ಟವಿಲ್ಲದಿದ್ದರೂ ಪ್ರಕೃತಿಗೆ ತಿಳಿಸಿ, ಬಸ್ ಹತ್ತಿ ಕಿಟಕಿಯ ಪಕ್ಕ ಕುಳಿತುಕೊಂಡವಳಿಗೆ ಕೇಳಿಸಿದ್ದು ಮತ್ತದೆ ಬೈಕಿನ ಹಾರನ್. ಖುಷಿಯಿಂದ ಮುಖ ತಾನಾಗಿಯೇ ಅರಳಿತು. ಆದರೆ ಕಾರಣ ಮಾತ್ರ ತಿಳಿಯಲಿಲ್ಲ. ಸ್ವಲ್ಪ ಕಿಟಕಿಯ ಗ್ಲಾಸನ್ನು ಸರಿಸಿ ಬಗ್ಗಿ ನೋಡಿದೆ ಇವರು ನನ್ನತ್ತಲೇ ನೋಡುತ್ತಿದ್ದರು. ಅವರ ಕಣ್ಣುಗಳು ಏನೋ ಹೇಳುತ್ತಿದ್ದಂತೆ ಭಾಸವಾದರೂ ಅವರ ಕಣ್ಣಿನ ಭಾಷೆಯನ್ನು ಅರಿಯುವಷ್ಟು ತಾಳ್ಮೆ, ಬುದ್ಧಿ ಎರಡೂ ನನಗಿರಲಿಲ್ಲ. ಹತ್ತುವವರೆಲ್ಲರೂ ಹತ್ತಿದ ಕೂಡಲೇ ಬಸ್ ಮುಂದೆ ಚಲಿಸಿತು. ಅವರು ಕಾಣುವಷ್ಟು ದೂರ ಅವರನ್ನು ನೋಡುತ್ತಲೇ ಇದ್ದವಳು ಅವರು ಮರೆಯಾಗುತ್ತಲೇ ಬಸ್ ಟಿಕೆಟ್ ಮಾಡಿಸಿ ಮುಂಜಾನೆ ಓದುತ್ತಿದ್ದ ಕಾರಂತರ ಮೂಕಜ್ಜಿಯ ಕನಸುಗಳು ಪುಸ್ತಕವನ್ನು ಓದಲು ಕುಳಿತೆ. ಪುಸ್ತಕದಲ್ಲೂ ಕಂಡಿದ್ದು ಅವರದ್ದೇ ಕಣ್ಣುಗಳ ಪ್ರತಿಬಿಂಬ. ಮನಸ್ಸು ಪ್ರಶಾಂತವಾಗಿರದ ಹೊರತು ದ್ವಂದ್ವದಲ್ಲಿದ್ದರೆ ಕಾರಂತರ ಪುಸ್ತಕಗಳನ್ನು ಓದಲಾಗುವುದಿಲ್ಲ. ಸುಮ್ಮನೇ ಪುಸ್ತಕವನ್ನು ಮುಚ್ಚಿಟ್ಟು ಸೀಟಿಗೊರಗಿದೆ. ಮನಸ್ಸಿನಲ್ಲಿ ಕೊರೆಯುತ್ತಿದ್ದದ್ದು ಮಾತ್ರ ಒಂದೇ ಪ್ರಶ್ನೆ ಯಾರವರು?. ಎನ್ನುವುದು.


ಮನೆಗೆ ಬಂದವಳೇ ಯಾರನ್ನು ಮಾತನಾಡಿಸುವ ಗೋಜಿಗೆ ಹೋಗದೆ ಸುಮ್ಮನೆ ಮಲಗಿದೆ. ಯಾವುದೋ ಒಂದು ಹೊತ್ತಿನಲ್ಲಿ ಅಪ್ಪ ಬಂದು ಊಟ ಮಾಡಿಸಲು ಪ್ರಯತ್ನಿಸುತ್ತಿದ್ದಾಗ ತಟ್ಟನೆ ಎಚ್ಚರವಾದರೂ ಕಣ್ಣು ಮುಚ್ಚಿಕೊಂಡೆ ಅವರಿಡುವ ತುತ್ತಿಗೆ ಬಾಯಿ ತೆರೆದೆ. ಕಣ್ಣು ತೆರೆದರೆ ಎಲ್ಲಿ ಅವರೇ ಕಾಣುತ್ತಾರೋ ಎನ್ನುವ ಭಯ. ಅಪ್ಪ ಏನೊಂದು ಪ್ರಶ್ನಿಸದೆ ಊಟ ಮಾಡಿಸಿದವರೇ ನೀರು ಕುಡಿಸಿ, ನನ್ನನ್ನು ಮಲಗಿಸಿ, ಹಣೆಗೆ ಚುಂಬಿಸಿ ಹೊರ ನಡೆದರು. ಕಣ್ಣು ಮುಚ್ಚಿದರು ಬಿಡದಂತೆ ಕಾಡುತ್ತಿದ್ದ ಹುಡುಗನ ಮೇಲೆ ಮುನಿಸು ಬಂದಿತ್ತಾದರೂ ಅದರ ಜೊತೆಗೆ ತಿಳಿ ಮಂದಹಾಸವೊಂದು ತುಟಿಯಂಚಿನಲ್ಲಿ ಅರಿವಿಲ್ಲದೆ ಮೂಡಿ ಮರೆಯಾಗಿ ಬಿಟ್ಟಿತು. ಸಂಜೆ ಬಂದವಳೇ ಮಲಗಿದ್ದಕ್ಕೋ ಏನೋ? ನಿದ್ರಾದೇವಿ ನನ್ನ ಮೇಲೆ ಮುನಿಸಿಕೊಂಡಿದ್ದಳು. ಒದ್ದಾಡಿ ಒದ್ದಾಡಿ ಹೇಗೋ ನಿದ್ರಾದೇವಿಯನ್ನು ಒಲಿಸಿಕೊಂಡವಳು ಮುಂಜಾನೆ ಐದರ ಸಮಯಕ್ಕೆ ಎಚ್ಚರಗೊಂಡು ಸಾಧ್ಯವಾದಷ್ಟು ಮನೆಕೆಲಸಗಳನ್ನು ಮುಗಿಸಿ ಅಮ್ಮನಿಗೆ ತಿಂಡಿ ಮಾಡಲು ಸಹಾಯ ಮಾಡಿ ಕಾಲೇಜಿಗೆ ಹೋಗಲು ರೆಡಿಯಾಗಿ ಬಂದವಳ ಹಣೆ ಮತ್ತು ಕುತ್ತಿಗೆಯನ್ನು ಮುಟ್ಟಿ ಅಮ್ಮ ಪರೀಕ್ಷಿಸಲಾರಾಂಭಿಸಿದರು. ಇಂದೇಕೋ ಅಮ್ಮನ ವರ್ತನೆ ವಿಚಿತ್ರವೆನಿಸಿ ಅವರಲ್ಲೇ ಕೇಳಿದೆ. "ಅಮ್ಮ ಏನಾಗಿದೆ ನಿಮಗೆ?, ಆಗ್ಲೇ ಇಂದ ನಾನು ನೋಡ್ತಾನೆ ಇದೀನಿ ನಂಗೆ ಯಾವುದೋ ದೆವ್ವ ಮೆಟ್ಟಿಕೊಂಡಿದೆ ಅನ್ನೋ ಹಾಗೇ ನನ್ನನ್ನೇ ವಿಚಿತ್ರವಾಗಿ ನೋಡೋದರ ಜೊತೆಗೆ ಈಗ ಬೇರೆ ಹಣೆಯೆಲ್ಲಾ ಮುಟ್ಟಿ ಪರೀಕ್ಷೆ ಬೇರೆ ಮಾಡ್ತಾ ಇದೀರ, ನಿಂಗೆ ಏನು ಆಗಿಲ್ಲ ನಾನು ಆರಾಮಾಗೆ ಇದ್ದೀನಿ" ಎಂದವಳ ಮಾತಿಗೆ ನಕ್ಕವರು, "ಅಲ್ಲಾ ಕಣೇ... ಪ್ರತಿದಿನ ನಾನಾಗೇ ಹೇಳಿದರೂ ಒಂದೂ ಕೆಲಸವನ್ನು ಮಾಡದವಳು ಇವತ್ತು ನಾನು ಹೇಳದಿದ್ರೂ ಎಲ್ಲಾ ಕೆಲಸವನ್ನು ಮಾಡಿದ್ದಲ್ಲದೆ, ಎಂದೂ ಅಡುಗೆ ಮನೆಗೆ ಕಾಲಿಡದವಳು ಇಂದು ಅಡುಗೆ ಮನೆಯನ್ನು ಪ್ರವೇಶಿಸಿ ಅಡುಗೆ ಮನೆಯನ್ನು ಪಾವನಗೊಳಿಸುವುದರ ಜೊತೆಗೆ ಅಡುಗೆ ಮಾಡಲು ನಂಗೆ ಸಹಾಯ ಬೇರೆ ಮಾಡಿದ್ಯಲ್ಲಾ ಅದ್ಕೆ ನೀನು ಆರಾಮಾಗಿ ಇದ್ದೀಯೋ? ಇಲ್ವೋ? ಅಂತ ಒಮ್ಮೆ ಪರೀಕ್ಷಿಸಿದೆ" ಎಂದು ನಕ್ಕು ನುಡಿದವರ ಮಾತುಗಳನ್ನು ಕೇಳಿ ಕೋಪ ಬಂದರೂ... ನನಗೂ ಕೇವಲ ಒಂದೇ ಒಂದು ದಿನದಲ್ಲಿ ನನ್ನ ವರ್ತನೆಯಲ್ಲಾದ ಬದಲಾವಣೆಯ ಕುರಿತು ಸೋಜಿಗವೆನಿಸ ತೊಡಗಿತು.


ಅಮ್ಮನಿಗೆ ಅನುಮಾನ ಬರಬಾರದು ಎನ್ನುವ ಕಾರಣಕ್ಕಾಗಿ "ಏನಮ್ಮ ನೀನು.. ಕೆಲ್ಸ ಮಾಡಿಲ್ಲ ಅಂದ್ರೆ ಹೇಳಿದ ಒಂದೂ ಕೆಲಸವನ್ನು ಮಾಡಲ್ಲ ಅಂತ ಅದಕ್ಕೂ ಬೈತೀಯಾ, ನಾನಾಗೇ ಕೆಲ್ಸ ಮಾಡಿದ್ರೆ ಅದಕ್ಕೂ ಏನಾದ್ರು ಹೇಳ್ತೀಯ. ನಿನ್ನ ಸಮಸ್ಯೆಯಾದ್ರು ಏನು ಹೇಳು?. ಈಗೇನೂ ನಿಂಗೆ ನಾನು ಕೆಲ್ಸ ಮಾಡಲ್ಲ ಅನ್ನುವುದಕ್ಕಿಂತ ಹೆಚ್ಚಾಗಿ ಕೆಲ್ಸ ಮಾಡಿದ್ದೆ ಸಮಸ್ಯೆಯಾಗುತ್ತೆ ಅನ್ನೋದಾದ್ರೆ ಇನ್ಮೇಲೆ ನಾನು ಯಾವ್ ಕೆಲ್ಸಾನು ಮಾಡಲ್ಲ ಆಯ್ತಾ" ಎಂದು ಕೋಪದಿಂದ ನುಡಿದವಳ ಮಾತಿಗೆ "ಅಯ್ಯೋ ಹಾಗಲ್ವೇ ತಾಯಿ ನೀನು ಕೆಲ್ಸ ಮಾಡು ಬಿಡು.... ನಂಗೆ ಬೇಜಾರಿಲ್ಲ. ಆದ್ರೆ ಈ ತರ ಕೋಪ ಮಾತ್ರ ಮಾಡ್ಕೋಬೇಡ... ನೀನು ಯಾವಾಗ್ಲೂ ನಗ್ತಾ ಇದ್ರೇನೆ ಚಂದ" ಎಂದು ನೊಸಲಿಗೆ ಚುಂಬಿಸಿದವರನ್ನು ಅಪ್ಪಿ ಬಾಯ್ ಹೇಳಿ ಹೊರಟವಳಿಗೆ ನೆನಪಾಗಿತ್ತು ತಿಂಡಿಯ ಬಾಕ್ಸ್. ಅಮ್ಮನಲ್ಲಿ ಕೇಳಿದೆ. ಅಮ್ಮ ಅದಾಗಲೇ ತಿಂಡಿ ಹಾಕಿ ನಿನ್ನ ಬ್ಯಾಗ್ ನಲ್ಲಿ ಇಟ್ಟಿದ್ದೀನಿ ಎಂದಾಗ ಅವರು ಕೊಟ್ಟಿದ್ದ ತಿಂಡಿಯ ಬಾಕ್ಸ್ ನೆನಪಾಯಿತು. ನಾನು ಅಮ್ಮನನ್ನು ಕೇಳುವ ಮೊದಲೇ ಅಮ್ಮ ಉತ್ತರಿಸಿದರು, ನಿನ್ನ ಬ್ಯಾಗ್ ನಲ್ಲಿದ್ದ ನಿನ್ ಫ್ರೆಂಡ್ ಬಾಕ್ಸಿಗೂ ತಿಂಡಿ ಹಾಕಿಟ್ಟಿದಿನಿ ಮರೀದೆ ಅವರಿಗೆ ಕೊಟ್ಟು ಬಿಡು ಎಂದವರಿಗೆ ಮತ್ತೆ ಮಾತು ಮುಂದುವರೆಸಲು ಅವಕಾಶ ನೀಡದೆ ಅಲ್ಲಿಂದ ಹೊರಟು ಬಂದಿದ್ದೆ.


ದಾರಿಯುದ್ದಕ್ಕೂ ಅವರದೇ ಯೋಚನೆ. ಯಾರ ಬಗ್ಗೆಯೂ ಅತಿಯಾಗಿ ಯೋಚಿಸದವಳ ಮನಸ್ಸಿನಲ್ಲಿ ಪ್ರಶ್ನಾರ್ಥಕ ಪ್ರಶ್ನೆಯಾಗೇ ಉಳಿದುಕೊಂಡು ಬಿಟ್ಟಿದ್ದನವ. ಎತ್ತ ನೋಡಿದರತ್ತ ಕಾಣುತ್ತಿದ್ದದ್ದು ಅವನ ಕಾಣುವ ಕಣ್ಣುಗಳೇ. ನನಗೆ ತಲೆಕೆಟ್ಟು ನಾನು ಹುಚ್ಚಿಯಾಗುವುದೊಂದೇ ಬಾಕಿ ಉಳಿದದ್ದು. ಬಸ್ಸಿನಿಂದ ಇಳಿದವಳು ಅವನಿಗಾಗಿ ಸುತ್ತಲೂ ನೋಡಿದೆ. ಎಲ್ಲೂ ಅವನ ಸುಳಿವಿರಲಿಲ್ಲ. ಇಡೀ ದಿನ ಅವನಿಗಾಗಿ ಕಾದಿದ್ದೆ ಬಂತು. ಸಂಜೆ ಮನೆಗೆ ಹೋಗುವವರೆಗೂ ಅವನ ದರ್ಶನವಾಗಿರಲಿಲ್ಲ. ಅರೇ ನಾನ್ಯಾಕೆ ಅವನ ಬಗ್ಗೆ ಇಷ್ಟೊಂದು ಯೋಚಿಸುತ್ತಿರುವೆ ಎನ್ನುವ ನನ್ನದೇ ಪ್ರಶ್ನೆಗೆ ನನ್ನಲ್ಲಿ ಉತ್ತರವೂ ಇರಲಿಲ್ಲ. ಮನೆಗೆ ಬಂದವಳು ಅಮ್ಮ ಹೇಳಿದಂತೆ ತಿಂಡಿಯ ಬಾಕ್ಸ್ ಎತ್ತಿಡಲು ಹೊರಟವಳಿಗೆ ಅಲ್ಲಿಯವರೆಗೂ ನೆನಪಿರದ ಅವನ ಬಾಕ್ಸ್ ನೆನಪಾಯಿತು. ಅವನ ಬಾಕ್ಸ್ ಗಾಗಿ ಬ್ಯಾಗ್ ಪೂರ್ತಿ ಹುಡುಕಾಡಿದೆ. ಆದರೆ ಆ ಬಾಕ್ಸ್ ನಾಪತ್ತೆಯಾಗಿ ಆ ಬಾಕ್ಸ್ ಇದ್ದ ಜಾಗದಲ್ಲಿ ಪುಟ್ಟದೊಂದು ಪತ್ರ ಬೆಚ್ಚಗೆ ಕುಳಿತಿತ್ತು. ತೆರೆದು ಓದಿದೆ.


"ಕೇವಲ ಒಂದೇ ದಿನದಲ್ಲಿ ಇಷ್ಟೊಂದು ಬದಲಾವಣೆ...! ವೆರಿ ಗುಡ್. ಈ ರೀತಿಯ ಉತ್ತಮ ಬದಲಾವಣೆಗಳು ಜೀವನದಲ್ಲಿ ಪದೇ ಪದೇ ಘಟಿಸುತ್ತಲೇ ಇರಬೇಕು. ಜೊತೆಗೆ ನಿಮ್ಮ ಅಮ್ಮನ ಕೈರುಚಿ ಅದ್ಭುತವಾಗಿದೆ. ಅವರ ಕೈರುಚಿಯನ್ನು ಪ್ರತಿದಿನ ಸವಿಯುವ ಅವಕಾಶವನ್ನು ಆದಷ್ಟು ಬೇಗ ಮಾಡಿಕೊಡು. ಅಂದ ಹಾಗೆ ಇನ್ನೊಂದು ಮಾತು ನೂರಾರು ಕನಸುಗಳನ್ನೊತ್ತು ಓದಲು ಬಂದಿರುವೆ ನೀನು. ನಿನ್ನ ಸಂಪೂರ್ಣ ಗಮನ ಏನಿದ್ದರೂ ನಿನ್ನ ಗಮ್ಯದತ್ತ ಇರಬೇಕೇ ಹೊರತು ಅಪರಿಚಿತ ಹುಡುಗನ ಕಣ್ಣುಗಳ ಮೇಲಲ್ಲ. ಸಮಯ ಬಂದಾಗ ನಾನೇ ನಿನ್ನ ಕಣ್ಣ ಮುಂದೆ ಬರುತ್ತೇನೆ. ಅಲ್ಲಿಯವರೆಗೆ ನನ್ನ ಬಗ್ಗೆ ಅತಿಯಾಗಿ ಯೋಚಿಸುವುದನ್ನು ಬಿಟ್ಟು ಓದಿನ ಕಡೆ ಹೆಚ್ಚಿನ ಗಮನ ಕೊಡು. ನಾನು ನಿನ್ನ ಬಲವಾಗಬೇಕೇ ಹೊರತು ನಿನ್ನ ಬಲಹೀನತೆಯಲ್ಲ. ಅದಕ್ಕಾಗಿಯೇ ನಿನ್ನಿಂದ ಬಹು ದೂರ ಉಳಿಯುವ ನಿರ್ಧಾರ ಮಾಡಿರುವುದು. ನನ್ನ ಬಗ್ಗೆ ಯೋಚಿಸಬೇಡ. ನಾನು ಯಾರು?, ನನ್ನ ಹೆಸರೇನು?, ನಾನ್ ಏನ್ ಮಾಡ್ಕೊಂಡಿದೀನಿ?, ನನ್ನ ಪೂರ್ವಾಪರ ಏನು?, ನೀನು ಅಂದ್ರೆ ನಂಗ್ಯಾಕೆ ಅಷ್ಟೊಂದು ಇಷ್ಟ?, ಎನ್ನುವುದು ಸಮಯ ಬಂದಾಗ ತಾನಾಗೇ ನಿನಗೆ ತಿಳಿಯುತ್ತದೆ. ಅಲ್ಲಿಯವರೆಗೆ ಮಿಸ್ ಯು ಬಂಗಾರಿ.... ಇಂತಿ ನಿನ್ನ  ಪ್ರೀತಿಯ ಕಾಡುವ ಕಣ್ಣಿನ ಹುಡುಗ...."


ಅದೇಕೋ ಕೊನೆಯ ಸಾಲನ್ನು ಓದುವಾಗ ಮನಸ್ಸು ಭಾರವಾಗಿತ್ತು. ಕಾರಣ?.. ತಿಳಿದಿಲ್ಲ. ಆ ಪತ್ರ ಹೇಗೆ ನನ್ನ ಬ್ಯಾಗ್ ಸೇರಿತೋ ಅದು ಸಹ ತಿಳಿಯಲಿಲ್ಲ. ಬಹುಶಃ ನಾನು ಲೈಬ್ರರಿಗೆ ಹೋಗಿದ್ದಾಗ ಅವರೇ ಬಂದು ಇಟ್ಟಿರಬೇಕು. ಆದರೂ ಒಮ್ಮೆ ಅವರೊಂದಿಗೆ ಮಾತನಾಡಬೇಕೆಂದು ಬಲವಾಗಿ ಅನಿಸಿತು. ಅವರು ಯಾರೋ? ನನಗಂತೂ ತಿಳಿದಿಲ್ಲ. ಅವರ ಕುರಿತಾಗಿ ನನ್ನ ಮನಸ್ಸು ಯಾಕಿಷ್ಟೊಂದು ಯೋಚಿಸುತ್ತಿದೆಯೋ? ಅದೂ ತಿಳಿದಿಲ್ಲ. ಬಹುಶಃ ನಾನೇನಾದರೂ ಅವರನ್ನು ಪ್ರೀತಿಸುತ್ತಿರುವೆನಾ? ಅಥವಾ ಇದು ಕೇವಲ ಆಕರ್ಷಣೆಯೋ? ಅದು ಕೂಡ ತಿಳಿಯಲಿಲ್ಲ. ಕಣ್ಣಿಗೆ ಇಷ್ಟವಾಗಿದ್ದು ಆಕರ್ಷಣೆ ಎನ್ನುವುದಾದರೇ?... ಕಣ್ಣೇ ಕಣ್ಣನ್ನು ಇಷ್ಟಪಟ್ಟಾಗ ಅದಕ್ಕೇನೆಂದು ಹೆಸರಿಡುವುದು? ಉತ್ತರ ಸಿಗದ ಪ್ರಶ್ನೆಯದು. ಅವರ ಬಗ್ಗೆ ತಿಳಿದುಕೊಳ್ಳಲೇ ಬೇಕೆನ್ನುವ ಕೆಟ್ಟ ಕುತೂಹಲ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಲೇ ಇತ್ತು. ನನ್ನ ಮನಸ್ಸನ್ನು ನನಗಿಂತ ಚೆನ್ನಾಗಿ ಅರಿತವರ ಮನವನ್ನು ಅರಿಯಲು ಮನಸ್ಸು ಪರಿತಪಿಸುತ್ತಿತ್ತು. ಪ್ರತಿದಿನ ಕಾಲೇಜಿಗೆ ಹೋಗುವಾಗಲೂ, ಕಾಲೇಜಿನಿಂದ ಬರುವಾಗಲೂ ನನ್ನ ಕಣ್ಣುಗಳು ಅರಸುತ್ತಿದ್ದದ್ದು ಮಾತ್ರ ಅವರನ್ನೇ. ಅವರನ್ನು ಕಾಣಲು ಯತ್ನಿಸುತ್ತಲೇ ಮೂರು ವರ್ಷಗಳು ಹೇಗೆ ಕಳೆದು ಹೋದವೋ ತಿಳಿದಿಲ್ಲ.


ಅಂದು ಫೈನಲ್ ಸೆಮ್ ಪರೀಕ್ಷೆಯ ಫಲಿತಾಂಶ ಪ್ರಕಟವಾಗುವ ದಿನ. ಪರೀಕ್ಷೆಯನ್ನು ಚೆನ್ನಾಗಿಯೇ ಮಾಡಿದ್ದರೂ ಮನಸ್ಸಿನ ಯಾವುದೋ ಒಂದು ಮೂಲೆಯಲ್ಲಿ  ಸಣ್ಣ ಭಯ. ಅಂದುಕೊಂಡಂತೆ ರಿಸಲ್ಟ್ ಬಾರದೆ ಹೋದರೆ?... ಎನ್ನುವ ನನ್ನ ಭಯಕ್ಕೆ ಅಂತ್ಯವಾಡಲೆಂದೇ ಕರೆ ಮಾಡಿದಳು ಪ್ರಕೃತಿ. ಅವಳು ಕರೆ ಮಾಡಿ ಪ್ರತಿ ಬಾರಿಯಂತೆ ಈ ಸಲವೂ ಇಡೀ ಯೂನಿವರ್ಸಿಟಿಗೆ ಮೊದಲು ಬಂದಿರುವುದು ನೀನೇ ಎಂದಾಗಲಂತೂ ನನ್ನ ಖುಷಿಗೆ ಪಾರವೇ ಇರಲಿಲ್ಲ. ಅಪ್ಪ ಅಮ್ಮನನ್ನಪ್ಪಿ ಅವರ ಕೆನ್ನೆಗೆ ಚುಂಬಿಸಿ ಇಬ್ಬರ ಆಶೀರ್ವಾದವನ್ನು ಪಡೆದು, ಕರೆ ಮಾಡಿ ವಿಷಯ ತಿಳಿಸಿದ್ದಕ್ಕಾಗಿ ಪ್ರಕೃತಿಗೆ ಧನ್ಯವಾದ ತಿಳಿಸಿ ಅವಳಿಗೂ ಕಾಲೇಜಿಗೆ ಬರುವಂತೆ ತಿಳಿಸಿ ನಾನು ಸಹ ಕಾಲೇಜಿಗೆ ಹೊರಟು ಬಂದೆ. ಮೂರು ವರ್ಷದಿಂದ  ಅವರಿಗಾಗಿ ಹುಡುಕಾಡಿದಂತೆ ಇಂದೂ ಸಹ ಅವರಿಗಾಗಿ ಹುಡುಕಾಡಿದೆ. ಆದರೆ ಅವರು ಮಾತ್ರ ಬರಲೇ ಇಲ್ಲ.


ಕಾಲೇಜಿನಲ್ಲಿ ಎಲ್ಲರಿಗೂ ಸಿಹಿ ಹಂಚಿ, ಸ್ನೇಹಿತರೆಲ್ಲರಿಗೂ ವಿದಾಯ ಹೇಳಿ, ಪ್ರಕೃತಿಯನ್ನು ಅಪ್ಪಿ ನಾನು ಅಳುವುದರ ಜೊತೆಗೆ ಅವಳನ್ನು ಅಳಿಸಿ, ನಂತರ ಸಮಾಧಾನಿಸಿ, ಕೊನೆಯದಾಗಿ ಅವಳೊಂದಿಗೆ ಜೊತೆಯಾಗಿ ಐಸ್ಕ್ರೀಂ ಸೇವಿಸಿ, ನಲ್ಮೆಯ ಗೆಳತಿಯೊಂದಿಗೆ ಒಂದಷ್ಟು ಸೆಲ್ಫಿಗಳನ್ನು ಕ್ಲಿಕ್ಕಿಸಿಕೊಂಡು ಅವಳನ್ನು ಬಸ್ ಹತ್ತಿಸಿ, ಜೋಪಾನ ಮನೆ ತಲುಪಿದ ನಂತರ ಫೋನ್ ಮಾಡೆಂದು ತಿಳಿಸಿ ನಮ್ಮೂರಿನ ಬಸ್ ಹತ್ತಿ ಕುಳಿತೆ. ಈಗಲಾದರೂ ಅವರನ್ನು ಕಾಣಬಹುದೇನೋ ಎನ್ನುವ ಸಣ್ಣ ನಿರೀಕ್ಷೆಯೊಂದಿಗೆ. ನನ್ನ ನಿರೀಕ್ಷೆ ಹುಸಿಯಾಗಲಿಲ್ಲ. ಕೊನೆಗೂ ಅವರ ದರ್ಶನ ಭಾಗ್ಯ ದೊರೆಯಿತು. ಅದು ಕೂಡ ತೀರಾ ಸನಿಹದಲ್ಲೇ ನನ್ನ ಪಕ್ಕವೇ ಬಂದು ಕುಳಿತು ಕಂಗ್ರಾಟ್ಸ್ ಎಂದವರು ಒಂದಷ್ಟು ನನ್ನ ಫೇವರಿಟ್ ಚಾಕ್ಲೆಟ್ ಗಳನ್ನು ನನ್ನ ಕೈಗಿಟ್ಟು, ನನ್ನ ಕೈಯೊಂದಿಗೆ ಕೈ ಬೆಸೆದರು. ಯಾವುದೋ ಭದ್ರತೆಯ ಭಾವ ನನ್ನನ್ನಾವರಿಸಿತು. ಅವರು ನನ್ನ ಜೊತೆಯಿದ್ದರೆ ಸಾಕು ನಾನು ಏನನ್ನು ಬೇಕಾದರೂ ಸಾಧಿಸಬಲ್ಲೆ, ನಾನು ಏನನ್ನೂ ಹೇಳುವ ಮೊದಲೇ ಎಲ್ಲವನ್ನೂ ಅರಿಯುವ ನನ್ನುಸಿರಿನ ಒಡೆಯನ ಉಸಿರಾಗಿ ಉಸಿರಿರುವವರೆಗೂ ಬಾಳಬೇಕೆನ್ನುವ ಆಸೆ ಹೆಚ್ಚಾಯಿತು. ಅದನ್ನೇ ಅವರ ಬಳಿ ಹೇಳಿದೆ. ನನ್ನ ಮಾತುಗಳನ್ನು ಕೇಳಿದವರು ಒಮ್ಮೆ ಶಬ್ದ ಬಾರದ ಹಾಗೆ ಜೋರಾಗಿ ನಕ್ಕು ಬಿಟ್ಟರು. ಒಮ್ಮೆ ಪುಟ್ಟದಾಗಿ ಅವರ ಭುಜಕ್ಕೆ ಏಟು ಕೊಟ್ಟವಳು ಹಾಗೆಯೇ ಅವರ ಭುಜಕ್ಕೊರಗಿ ಕಣ್ಣು ಮುಚ್ಚಿದೆ.


ತಕ್ಷಣವೇ ಏನೋ ನೆನಪಾದವಳಂತೆ ಅವರ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ ಕಣ್ಣು ಬಿಟ್ಟು ಸುತ್ತಲೂ ಅವರಿಗಾಗಿ ನೋಡಿದೆ. ಆದರೆ ಅವರೆಲ್ಲೂ ಕಾಣಲಿಲ್ಲ. ಮತ್ತೊಮ್ಮೆ ಕಣ್ಣನ್ನು ಜೋರಾಗಿ ಉಜ್ಜಿಕೊಂಡು ಸುತ್ತಲೂ ಅವರಿಗಾಗಿ ಹುಡುಕಾಡಿದೆ. ಆದರೆ ಅವರಲ್ಲಿ ಇದ್ದರಲ್ಲವೇ ನನ್ನ ಕಣ್ಣಿಗೆ ಕಾಣಿಸುವುದು?. ಅರೇ ಇಷ್ಟೊತ್ತು ನನ್ನ ಜೊತೆಯಲ್ಲೇ ಇದ್ದರಲ್ಲಾ... ಅಷ್ಟು ಬೇಗ ಎಲ್ಲಿಗೆ ಹೋದರು?. ಎಂದು ಅವರ ಬಗ್ಗೆಯೇ ಯೋಚಿಸುತ್ತಿದವಳ ತಲೆಗೆ ಯಾರೋ ಹೊಡೆದಂತಾಯಿತು. ತಿರುಗಿ ನೋಡಿದೆ. ಪಕ್ಕದಲ್ಲಿ ನನ್ನ ಗೂಬೆ ಫ್ರೆಂಡ್ ಶಾಂಭವಿ ಯಾವುದೋ ಅನ್ಯಗ್ರಹ ಜೀವಿಯಂತೆ ನನ್ನನ್ನೇ ವಿಚಿತ್ರವಾಗಿ ನೋಡುತ್ತಾ ನಿಂತಿದ್ದಳು. ಒಮ್ಮೆ ಪುಟ್ಟದಾಗಿ ಅವಳ ಕೈಗೆ ಚಿವುಟಿದೆ, ಅವಳು ಅಮ್ಮಾ ಎಂದು ಕಿರುಚಿದಾಗಲೇ ನನಗೆ ಕನ್ಫರ್ಮ್ ಆಗಿದ್ದು, ಇಷ್ಟೊತ್ತು ನಾನು ಕಂಡಿದ್ದು ಕನಸು ಎನ್ನುವುದು.


ಗಡಿಯಾರ ನೋಡಿದೆ ಮುಂಜಾನೆ ಐದರ ಆಸುಪಾಸು. ಬೆಳಗ್ಗೆ ಬಿದ್ದ ಕನಸು ನನಸಾಗುತ್ತಂತೆ ಎಂದು ಹಿಂದೊಮ್ಮೆ ಇವಳೇ ಹೇಳಿದ ಮಾತು ನೆನಪಾಯಿತು. ಆಕಸ್ಮಿಕವಾಗಿ ಬಿದ್ದ ಚಂದದ ಕನಸನ್ನು ನೆನಪಿಸಿಕೊಂಡವಳ ಮೈಯೆಲ್ಲಾ ರೋಮಾಂಚನವಾಯಿತು. ಕಾಡುವ ಕಣ್ಣಿನ ಹುಡುಗನ ನೆನಪಾಗುತ್ತಲೇ ತುಟಿಯಲ್ಲಿ ಸಣ್ಣದಾಗಿ ನಗುವರಳಿತು. ನಾನು ಹೀಗೆ ಹುಚ್ಚಿ ತರ ಒಬ್ಬೊಬ್ಬಳೇ ನಗ್ತಿದ್ರೆ... ಖಂಡಿತಾ ಇವಳು ನನ್ನ ನಿಮ್ಹಾನ್ಸ್ಗೆ ಸೇರಿಸಿ ಬಿಡ್ತಾಳೆ ಎನ್ನುವ ಭಯಕ್ಕೆ ಅವಳಿಗೆ ಮಾತನಾಡಲು ಸಹ ಅವಕಾಶವನ್ನು ನೀಡದೆ ಅವಳ ಕೆನ್ನೆಗೆ ಚುಂಬಿಸಿ, ಅವಳನ್ನು ನೋಡುವ ಪ್ರಯತ್ನವನ್ನು ಮಾಡದೇ ತಯಾರಾಗಿ ಕಾಲೇಜಿಗೆ ಹೊರಟು ಬಂದವಳು ಬಸ್ಸಿನಿಂದ ಇಳಿಯುತ್ತಲೇ ಕಾಣ ಬಯಸಿದ್ದು ಕನಸ್ಸಿನಲ್ಲಿ ಕಾಡಿದ ಅದೇ,ಕಾಡುವ ಕಣ್ಣಿನ ಹುಡುಗನ ಕಣ್ಣುಗಳನ್ನೇ.


ಮೇಘ ಮಾಲಾ

ಶಾಲಾ ಶಿಕ್ಷಕಿ, ಬೆಂಗಳೂರು




Comments


bottom of page