top of page
Writer's picturevishwa patha

77ನೇ ಸ್ವಾತಂತ್ರ್ಯೋತ್ಸವ : ಪ್ರಧಾನಿ ಮೋದಿ ಭಾಷಣದ ಪ್ರಮುಖ ಅಂಶಗಳು



ದೆಹಲಿ: ದೇಶದ 77ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೆಂಪು ಕೋಟೆಯಲ್ಲಿ ಮಂಗಳವಾರ ಧ್ವಜಾರೋಹಣ ನೆರವೇರಿಸಿ ದೇಶದ ಜನತೆಗೆ ಶುಭ ಕೋರಿದರು, ಬಳಿಕ ದೇಶವನ್ನು ಉದ್ದೇಶಿಸಿ 82 ನಿಮಿಷಗಳ ಕಾಲ ಭಾಷಣ ಮಾಡಿದರು.


ಭಾಷಣದ ಪ್ರಮುಖ ಅಂಶಗಳು:

77ನೇ ಸ್ವಾತಂತ್ರ್ಯ ದಿನಾಚರಣೆಯ ಈ ದಿನ ನಮಗಾಗಿ ಪ್ರಾಣ ತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರರಿಗೆ ನಾವು ಗೌರವ ಸಲ್ಲಿಸುವ ಮೂಲಕ ಅವರ ಉದ್ದೇಶಗಳನ್ನು ಈಡೇರಿಸಬೇಕು ಎಂದು ಹೇಳಿದರು.


ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ದೇಶ ಈಗ ಜನಸಂಖ್ಯೆ ದೃಷ್ಟಿಯಲ್ಲೂ ಮುಂಚೂಣಿಯಲ್ಲಿದೆ. ಇಂದು 140 ಕೋಟಿ ಭಾರತೀಯರು ಸಂಭ್ರಮದಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ, ಧೀರ ಯೋಧರಿಗೆ ಮೋದಿ ಗೌರವ ನಮನ ಸಲ್ಲಿಸಿದರು. 1000 ವರ್ಷಗಳ ಗುಲಾಮಗಿರಿಯಲ್ಲಿ ಈ ದೇಶ ಲೂಟಿಗೆ ಒಳಗಾಗಿದೆ, ಆದರೆ ಯಾವುದಕ್ಕೂ ಅಂಜಕೆ ಪಡದೆ ಅನೇಕ ಭಾರತೀಯ ಧೀರ ಯೋಧರು ಸ್ವಾತಂತ್ರ್ಯದ ಜ್ವಾಲೆ ಉರಿಯುವಂತೆ ಮಾಡಿದ್ದಾರೆ, ಎಂದು ಯೋಧರನ್ನು ಕುರಿತು ಮಾತನಾಡಿದರು.


ಮಣಿಪುರದ ವಿಷಯ ಪ್ರಸ್ತಾಪಿಸಿದ ಮೋದಿ, ಕಳೆದ ಕೆಲವು ವಾರಗಳಿಂದ ಈಶಾನ್ಯ ರಾಜ್ಯದಲ್ಲಿ ಹಲವು ಹಿಂಸಾಚಾರಗಳು ನಡೆದಿವೆ. ಈ ಹಿಂಸಾಚಾರದಲ್ಲಿ ಅನೇಕ ಮಂದಿ ಜೀವ ಕಳೆದುಕೊಂಡಿದ್ದಾರೆ. ಶಾಂತಿಯ ಮೂಲಕ ಮಾತ್ರ ಅಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯ. ಮಣಿಪುರದೊಂದಿಗೆ ಇಡೀ ದೇಶವೇ ನಿಂತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಣಿಪುರದ ಶಾಂತಿ ಸ್ಥಾಪನೆಗೆ ಎಲ್ಲಾ ತರಹದ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಹೇಳಿದರು.


ಆರೋಗ್ಯ ವಲಯದಲ್ಲಿ ಆಗುತ್ತಿರುವ ಬೆಳವಣಿಗೆಯನ್ನು ಕೊಂಡಾಡಿದ ಮೋದಿ, ಇಂದು ದೇಶದ ಆಯುಷ್ ಮತ್ತು ಯೋಗದತ್ತ ಇಡೀ ವಿಶ್ವವೇ ದೃಷ್ಟಿ ನೆಟ್ಟಿದೆ, ದೇಶದ ಜನತೆಯ ಕಲ್ಯಾಣಕ್ಕಾಗಿ ಸರ್ಕಾರದ ಪ್ರತಿ ಕ್ಷಣ, ಪ್ರತಿ ರೂಪಾಯಿ ವಿನಿಯೋಗಿಸಲಾಗುತ್ತಿದೆ ಎಂದರು.


ಐದು ವರ್ಷಗಳಲ್ಲಿ 13.5 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ನಗರ ಪ್ರದೇಶಗಳಲ್ಲಿ ಸ್ವಂತ ಮನೆ ನಿರ್ಮಿಸುವ ಕನಸು ಹೊಂದಿರುವವರಿಗೆ, ಬ್ಯಾಂಕ್ ಸಾಲದಲ್ಲಿ ನಿರಾಳತೆಯನ್ನುಂಟು ಮಾಡುವ ಹೊಸ ಯೋಜನೆಯನ್ನು ಶೀಘ್ರವೇ ಜಾರಿಗೆ ತರಲಿದ್ದೇವೆ, ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.


ದೇಶದ ಕಾರ್ಮಿಕರಿಗೆ ನೆರವಾಗಲು 13,000ರಿಂದ 15,000 ಕೋಟಿ ರೂಪಾಯಿ ವೆಚ್ಚದಲ್ಲಿ 'ವಿಶ್ವಕರ್ಮ ಯೋಜನೆ'ಗೆ ಚಾಲನೆ ನೀಡಲಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಈ ವೇಳೆಯಲ್ಲಿ ಘೋಷಿಸಿದರು.


ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಸಾಧನೆಯನ್ನು ಕೊಂಡಾಡಿದ ಮೋದಿ, ಭಾರತದ ಕನಸುಗಳನ್ನು ನನಸಾಗಿಸಲು ದೇಶದ ಜೊತೆ ಜನಸಂಖ್ಯೆ, ಪ್ರಜಾಪ್ರಭುತ್ವ, ವೈವಿಧ್ಯತೆ ಇದೆ ಎಂದು ಅವರು ಹೇಳಿದರು. ಸುಧಾರಣೆ, ಸಾಧನೆ ಮತ್ತು ಪರಿವರ್ತನೆ ದೇಶವನ್ನು ಬದಲಾಯಿಸುತ್ತಿವೆ ಎಂದು ಪ್ರಧಾನಿ ನುಡಿದರು.


ದೇಶದಲ್ಲಿ ಮಹಿಳಾ ಕೇಂದ್ರಿತ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ದೇಶದಲ್ಲಿ ಸುಮಾರು 10 ಕೋಟಿ ಮಹಿಳಾ ಸ್ವ–ಸಹಾಯ ಗುಂಪುಗಳು ಸಕ್ರಿಯವಾಗಿವೆ. ವಿಮಾನಯಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಸಾಧನೆ ಗಮನಾರ್ಹ, ಮಹಿಳಾ ಸ್ವ–ಸಹಾಯ ಗುಂಪುಗಳಿಗೆ ಡ್ರೋನ್ ನೀಡುವ ಯೋಜನೆಯನ್ನು ಆರಂಭಿಸಲಾಗುವುದು, ಈ ಯೋಜನೆಯನ್ನು 15 ಸಾವಿರ ಮಹಿಳಾ ಸ್ವ–ಸಹಾಯ ಗುಂಪುಗಳಿಗೆ ತಲುಪಿಸಲಾಗುವುದು ಎಂದು ತಿಳಿಸಿದರು.

Comments


bottom of page