top of page

'ಮುಟ್ಟು ಅಂಗವೈಕಲ್ಯವಲ್ಲ' ವೇತನ ಸಹಿತ ರಜೆಗೆ ಸ್ಮೃತಿ ಇರಾನಿ ವಿರೋಧ

  • Writer: vishwa patha
    vishwa patha
  • Dec 13, 2023
  • 1 min read


ಮುಟ್ಟು ಎಂಬುದು ಅಂಗವೈಕಲ್ಯವಲ್ಲ, ಇದಕ್ಕೆ ಮಹಿಳೆಯರಿಗೆ ವೇತನ ಸಹಿತ ರಜೆಯ ಅಗತ್ಯವಿಲ್ಲ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.


ಬುಧವಾರ ರಾಜ್ಯಸಭೆಯಲ್ಲಿ ಆರ್‌ಜೆಡಿ ಸದಸ್ಯ ಮನೋಜ್ ಕುಮಾರ್ ಝಾ ಅವರ ಪ್ರಶ್ನೆಗೆ ಉತ್ತರಿಸಿದ ಸ್ಮೃತಿ ಇರಾನಿ ಅವರು, “ಋತುಚಕ್ರವು ಮಹಿಳೆಯರ ಕೆಲಸಕ್ಕೆ ಎಂದೂ ಅಡ್ಡಿಯಾಗುವುದಿಲ್ಲ, ಅದು ಅಂಗವೈಕಲ್ಯವಲ್ಲ, ಇದು ಮಹಿಳೆಯರ ಜೀವನದ ಒಂದು ಭಾಗ ಹಾಗೂ ಸಹಜ ಪ್ರಕ್ರಿಯೆ” ಎಂದು  ಮಹಿಳೆಯರಿಗೆ ವೇತನ ಸಹಿತ ಮುಟ್ಟಿನ ರಜೆಯ ನೀತಿಗೆ ವಿರೋಧ ವ್ಯಕ್ತಪಡಿಸಿದರು.


ಮಹಿಳೆಯರಿಗೆ ನಿರ್ದಿಷ್ಟ ಸಂಖ್ಯೆಯ ರಜೆ ನೀಡಲು ಕಂಪನಿಗಳಿಗೆ ಕಡ್ಡಾಯ ನಿಬಂಧನೆಗಳನ್ನು ವಿಧಿಸಲು ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ಝಾ ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರಿಸಿದ ಸ್ಮೃತಿ ಇರಾನಿ, ‘ಮುಟ್ಟಾಗದವರು ಮುಟ್ಟಿನ ಬಗ್ಗೆ ನಿರ್ದಿಷ್ಟ ದೃಷ್ಟಿಕೋನವನ್ನು ಹೊಂದಿದ್ದಾರೆ ಎಂಬ ಕಾರಣಕ್ಕಾಗಿ ಮಹಿಳೆಯರಿಗೆ ಸಮಾನ ಅವಕಾಶವನ್ನು ನಿರಾಕರಿಸುವ ವಿಚಾರಗಳನ್ನು ನಾವು ಪ್ರಸ್ತಾಪಿಸಬಾರದು’ ಎಂದು ಹೇಳಿದರು.


“ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮುಟ್ಟಿನ ನೈರ್ಮಲ್ಯದ ಕರಡು ನೀತಿಯನ್ನು ಸಿದ್ಧಪಡಿಸಿದೆ. 10-19 ವಯೋಮಾನದ ಬಾಲಕಿಯರಲ್ಲಿ ಮುಟ್ಟಿನ ನೈರ್ಮಲ್ಯವನ್ನು ಉತ್ತೇಜಿಸಲು ಕೇಂದ್ರವು ಈಗಾಗಲೇ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಇದಲ್ಲದೆ, ಮಧ್ಯಸ್ಥಗಾರರೊಂದಿಗೆ ಸಮಾಲೋಚಿಸಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮುಟ್ಟಿನ ನೈರ್ಮಲ್ಯದ ಕರಡು ನೀತಿಯನ್ನು ರೂಪಿಸಿದೆ” ಎಂದು ಇರಾನಿ ಅವರು ಸದನಕ್ಕೆ ತಿಳಿಸಿದರು.


‘ತಜ್ಞರೊಂದಿಗೆ ಸಮಾಲೋಚಿಸಿ ಆರೋಗ್ಯ ಸಚಿವಾಲಯವು ಮುಟ್ಟಿನ ನೈರ್ಮಲ್ಯ ನೀತಿ ಕರಡನ್ನು ರೂಪಿಸಿದೆ’ ಎಂದು ಹೇಳಿದ ಅವರು, ಋತುಚಕ್ರದ ನೈರ್ಮಲ್ಯವನ್ನು ಉತ್ತೇಜಿಸಲು ವಿವಿಧ ಸಚಿವಾಲಯಗಳು ಕೈಗೊಂಡ ಇತರ ಉಪಕ್ರಮಗಳನ್ನು ಸದನಕ್ಕೆ ವಿವರಿಸಿದರು.

ಸರ್ಕಾರಿ ಮಹಿಳಾ ನೌಕರರಿಗೆ ವಿಶೇಷ ಮುಟ್ಟಿನ ರಜೆಯ ವಿಷಯವು ಆರೋಗ್ಯಕ್ಕೆ ಸಂಬಂಧಿಸಿದ ವಿಷಯವಾಗಿದೆ. ಆದ್ದರಿಂದ ವೇತನ ಸಹಿತ ರಜೆ ನೀಡುವ ಬಗ್ಗೆ ಪರಿಶೀಲಿಸಬಹುದು ಎಂದು ಆಡಳಿತ ಸುಧಾರಣೆ ಮತ್ತು ಸಿಬ್ಬಂದಿ ಸಚಿವಾಲಯ ಹೇಳಿದ ಈ ವಿಚಾರ ಚರ್ಚೆಗೆ ಇದು ಬಂದಿದೆ.

Comentários


bottom of page