IPL 2024: ಐಪಿಎಲ್ನಲ್ಲಿ ಮಹತ್ವದ ಬದಲಾವಣೆ..!
- vishwa patha
- Jul 31, 2023
- 1 min read

IPL 2024: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17 ರ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆಯಾಗುವುದು ಬಹುತೇಕ ಖಚಿತವಾಗಿದೆ. ಈ ಹಿಂದೆ ಏಪ್ರಿಲ್-ಮೇ ತಿಂಗಳಲ್ಲಿ ನಡೆಯುತ್ತಿದ್ದ ವಿಶ್ವದ ಶ್ರೀಮಂತ ಲೀಗ್ ಈ ಬಾರಿ ಮಾರ್ಚ್ನಲ್ಲೇ ಶುರುವಾಗಲಿದೆ. ಇದಕ್ಕೆ ಮುಖ್ಯ ಕಾರಣ ಮುಂಬರುವ ಟಿ20 ವಿಶ್ವಕಪ್. 2024 ಟಿ20 ವಿಶ್ವಕಪ್ ಜೂನ್ 4 ರಿಂದ ಆರಂಭವಾಗಲಿದ್ದು, ಅದಕ್ಕೂ ಮುಂಚಿತವಾಗಿಯೇ ಟೂರ್ನಿಯನ್ನು ಅಂತ್ಯಗೊಳಿಸಬೇಕಾದ ಅನಿವಾರ್ಯತೆ ಬಿಸಿಸಿಐ ಮುಂದಿದೆ. ಹೀಗಾಗಿ ಮಾರ್ಚ್ ಮೊದಲ ಅಥವಾ 2ನೇ ವಾರದಲ್ಲಿ ಐಪಿಎಲ್ ಸೀಸನ್ 17 ಶುರುವಾಗುವ ಸಾಧ್ಯತೆ ಹೆಚ್ಚಿದೆ.
ವಿದೇಶದಲ್ಲಿ ಟೂರ್ನಿ:
2024 ರಲ್ಲೇ ಭಾರತದಲ್ಲಿ ಸಾರ್ವತ್ರಿಕ ಚುನಾವಣೆ ಕೂಡ ನಡೆಯಲಿದೆ. ಹೀಗಾಗಿ ಈ ಬಾರಿ ಟೂರ್ನಿಯನ್ನು ವಿದೇಶದಲ್ಲಿ ಆಯೋಜಿಸಲು ಬಿಸಿಸಿಐ ಚಿಂತಿಸಿದೆ. ಏಕೆಂದರೆ 2009 ಹಾಗೂ 2014 ಲೋಕಸಭಾ ಚುನಾವಣೆ ನಿಮಿತ್ತ ಐಪಿಎಲ್ ಅನ್ನು ವಿದೇಶದಲ್ಲಿ ಆಯೋಜಿಸಲಾಗಿತ್ತು. 2009 ರಲ್ಲಿ ಸೌತ್ ಆಫ್ರಿಕಾದಲ್ಲಿ ಟೂರ್ನಿ ನಡೆದರೆ, 2014 ರಲ್ಲಿ ಯುಎಇನಲ್ಲಿ ಕೆಲ ಪಂದ್ಯಗಳನ್ನು ಆಡಲಾಗಿತ್ತು. ಇದೀಗ ಮತ್ತೆ ಐಪಿಎಲ್ ಸಂದರ್ಭದಲ್ಲೇ ಚುನಾವಣಾ ದಿನಾಂಕ ಘೋಷಣೆಯಾದರೆ ವಿದೇಶದಲ್ಲಿ ಟೂರ್ನಿ ನಡೆಯುವುದು ಖಚಿತ ಎನ್ನಬಹುದು.
ಡಬಲ್ ಹೆಡ್ಡರ್ ಪಂದ್ಯಗಳ ಸಂಖ್ಯೆ ಹೆಚ್ಚಳ:
ಮುಂಬರುವ ಟಿ20 ವಿಶ್ವಕಪ್ ಹಿನ್ನಲೆಯಲ್ಲಿ ಕಡಿಮೆ ಅವಧಿಯಲ್ಲಿ ಐಪಿಎಲ್ ಮುಗಿಸಬೇಕಾದ ಅನಿವಾರ್ಯತೆ ಬರಲಿದೆ. ಏಕೆಂದರೆ ಬಹುತೇಕ ರಾಷ್ಟ್ರೀಯ ತಂಡಗಳ ಆಟಗಾರರು ಟಿ20 ವಿಶ್ವಕಪ್ ಆರಂಭಕ್ಕೆ ಒಂದೆರೆಡು ವಾರ ಮುಂಚಿತವಾಗಿ ತಮ್ಮ ದೇಶಗಳಿಗೆ ಹಿಂತಿರುಗಲಿದ್ದಾರೆ. ಹೀಗಾಗಿ ಸ್ಟಾರ್ ಆಟಗಾರರು ಅರ್ಧದಲ್ಲೇ ಐಪಿಎಲ್ ತೊರೆಯುವುದನ್ನು ತಡೆಯಲು ಬಿಸಿಸಿಐ ಪ್ಲ್ಯಾನ್ ರೂಪಿಸಲಿದೆ. ಇದಕ್ಕಾಗಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಪಂದ್ಯಗಳನ್ನು ಆಯೋಜಿಸಬೇಕಾಗುತ್ತದೆ. ಅಂದರೆ ಹೆಚ್ಚಿನ ಡಬಲ್ ಹೆಡ್ಡರ್ ಪಂದ್ಯಗಳ ಮೂಲಕ ಐಪಿಎಲ್ ಅನ್ನು ಬೇಗನೆ ಮುಗಿಸಬಹುದು.
コメント