top of page
Writer's picturevishwa patha

ಆರೋಗ್ಯಕರ ಆಹಾರ ಪಡೆಯಲು ಶೇ.74.1ರಷ್ಟು ಭಾರತೀಯರು ಅಸಮರ್ಥರು: ಎಫ್‌ಎಒ ವರದಿ



ಹೊಸದಿಲ್ಲಿ: ಶೇ.74.1ರಷ್ಟು ಭಾರತೀಯರು 2021ರಲ್ಲಿ ಆರೋಗ್ಯಕರ ಆಹಾರವನ್ನು ಪಡೆಯಲು ಅಸಮರ್ಥರಾಗಿದ್ದರು ಎಂದು ವಿಶ್ವಸಂಸ್ಥೆಯ ಕೃಷಿ ಮತ್ತು ಆಹಾರ ಸಂಸ್ಥೆ (ಎಫ್‌ಎಒ)ಯ ವರದಿಯು ತಿಳಿಸಿದೆ. 2020ರಲ್ಲಿ ಇಂತಹವರ ಸಂಖ್ಯೆ ಶೇ.76.2ರಷ್ಟಿತ್ತು. ಇದು ಪಾಕಿಸ್ತಾನದಲ್ಲಿ ಶೇ.82.2 ಮತ್ತು ಬಾಂಗ್ಲಾದೇಶದಲ್ಲಿ ಶೇ.66.1 ಆಗಿತ್ತು. ಹೆಚ್ಚುತ್ತಿರುವ ಆಹಾರ ವೆಚ್ಚಗಳಿಗೆ ಅನುಗುಣವಾಗಿ ಆದಾಯವು ಹೆಚ್ಚದಿದ್ದರೆ ಇನ್ನಷ್ಟು ಹೆಚ್ಚು ಜನರು ಆರೋಗ್ಯಕರ ಆಹಾರವನ್ನು ಪಡೆಯಲು ಅಸಮರ್ಥರಾಗಲಿದ್ದಾರೆ ಎಂದು ವರದಿಯು ಎಚ್ಚರಿಕೆ ನೀಡಿದೆ.


ಕೋವಿಡ್ ಸಾಂಕ್ರಾಮಿಕ ಮತ್ತು ‘5 ಎಫ್’ಗಳ (ಆಹಾರ, ಆಹಾರ ಪೂರೈಕೆ, ಇಂಧನ, ರಸಗೊಬ್ಬರಗಳು ಮತ್ತು ಹಣಕಾಸು) ಬಿಕ್ಕಟ್ಟಿನ ಸಂದರ್ಭದಲ್ಲಿ ಪ್ರದೇಶವು ತೀವ್ರ ತೊಂದರೆಗೊಳಗಾಗಿತ್ತು ಎಂದು ವರದಿಯು ಹೇಳಿದೆ.


ಇಂದಿಗೂ ಈ ಪ್ರದೇಶವು ಕೆಲವು ದೀರ್ಘಕಾಲಿಕ ಪರಿಣಾಮಗಳಿಂದ ಬಳಲುತ್ತಿದೆ. 37.07 ಕೋಟಿ ಅಪೌಷ್ಟಿಕ ಜನರನ್ನು ಹೊಂದಿರುವ ಪ್ರದೇಶವು ವಿಶ್ವದಲ್ಲಿಯ ಇಂತಹ ಒಟ್ಟು ಜನಸಂಖ್ಯೆಯ ಅರ್ಧವನ್ನು ಈಗಲೂ ಪ್ರತಿನಿಧಿಸುತ್ತಿದೆ ಎನ್ನುವುದನ್ನು ಇತ್ತೀಚಿನ ಅಂಕಿಅಂಶಗಳು ಸೂಚಿಸಿವೆ. ಇದೇ ರೀತಿ ಏಶ್ಯಾ ಮತ್ತು ಪೆಸಿಫಿಕ್ ಪ್ರದೇಶದಲ್ಲಿ ತೀವ್ರ ಆಹಾರ ಅಭದ್ರತೆಯು ವಿಶ್ವಕ್ಕೆ ಹೋಲಿಸಿದರೆ ಅರ್ಧದಷ್ಟಿದೆ ಮತ್ತು ಆಹಾರ ಅಭದ್ರತೆಯು ಪುರುಷರಿಗಿಂತ ಮಹಿಳೆಯರನ್ನು ಹೆಚ್ಚು ಕಾಡುತ್ತಿದೆ. ಐದು ವರ್ಷಕ್ಕಿಂತ ಕೆಳಗಿನ ವಯೋಮಾನದ ಮಕ್ಕಳಲ್ಲಿ ಕುಬ್ಜತೆ, ಕೃಶಕಾಯ ಮತ್ತು ಅತಿಯಾದ ತೂಕ ಹಾಗೂ ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರಲ್ಲಿ ರಕ್ತಹೀನತೆ ಸಮಸ್ಯೆಗೆ ಸಂಬಂಧಿಸಿದಂತೆ ಡಬ್ಲ್ಯುಎಚ್‌ಎ ಗುರಿಗಳನ್ನು ಸಾಧಿಸಲು ಇನ್ನೂ ಬಹಳಷ್ಟು ದೂರ ಸಾಗಬೇಕಿದೆ ಎಂದು ವರದಿಯು ತಿಳಿಸಿದೆ.


ದೇಶದ ಶೇ.16.6ರಷ್ಟು ಜನರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ಹೇಳಿರುವ ವರದಿಯು, ಅಪೌಷ್ಟಿಕತೆಯು ಆರೋಗ್ಯ ಮತ್ತು ಪೌಷ್ಟಿಕಾಂಶ ಯೋಗಕ್ಷೇಮದ ಮೇಲೆ ಮಾತ್ರವಲ್ಲ,ಆರ್ಥಿಕ ಮತ್ತು ಸಾಮಾಜಿಕ ವೆಚ್ಚಗಳ ಮೇಲೂ ವ್ಯತಿರಿಕ್ತ ಪರಿಣಾಮಗಳನ್ನು ಬೀರಿದೆ ಎಂದು ತಿಳಿಸಿದೆ. ವರದಿಯ ಪ್ರಕಾರ, ಪ್ರದೇಶದಲ್ಲಿ ಮಧ್ಯಮ ಅಥವಾ ತೀವ್ರ ಆಹಾರ ಅಭದ್ರತೆಯ ವ್ಯಾಪಕತೆಯು 2015ರಿಂದ ವಿಶ್ವದಲ್ಲಿಯ ವ್ಯಾಪಕತೆಗೆ ಹೋಲಿಸಿದರೆ ಕಡಿಮೆಯಿತ್ತು.


ದೇಶದಲ್ಲಿ 31.7ರಷ್ಟು ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಕುಂಠಿತ ಬೆಳವಣಿಗೆಯಿಂದ ಬಳಲುತ್ತಿದ್ದರೆ ಶೇ.18.7ರಷ್ಟು ಮಕ್ಕಳು ಕೃಶಕಾಯ (ಎತ್ತರಕ್ಕೆ ಹೋಲಿಸಿದರೆ ಕಡಿಮೆ ತೂಕ)ವನ್ನು ಹೊಂದಿದ್ದು, ಪ್ರಮುಖ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

ದೇಶದಲ್ಲಿ 15ರಿಂದ 49ವರ್ಷ ವಯೋಮಾನದ ಶೇ.53ರಷ್ಟು ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂದೂ ವರದಿಯು ಬೆಟ್ಟು ಮಾಡಿದೆ.


ರಕ್ತಹೀನತೆಯು ಮಹಿಳೆಯರ ಆರೋಗ್ಯವನ್ನು ದುರ್ಬಲಗೊಳಿಸುತ್ತದೆ ಮತ್ತು ಹೆರಿಗೆಯ ಸಂದರ್ಭದಲ್ಲಿ ಅಪಾಯವನ್ನು ಹೆಚ್ಚಿಸುತ್ತದೆ ಎಂದು ವರದಿಯು ಎಚ್ಚರಿಕೆ ನೀಡಿದೆ. ದೇಶದಲ್ಲಿ ಶೇ.1.6ರಷ್ಟು ವಯಸ್ಕರು ಬೊಜ್ಜನ್ನು ಹೊಂದಿದ್ದಾರೆ ಎಂದೂ ವರದಿಯು ತಿಳಿಸಿದೆ.

Comments


bottom of page