ಬೆಂಗಳೂರು: ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಫಲಕ ಅಳವಡಿಸಲು ನಿಗದಿ ಮಾಡಿದ್ದ ಅವಧಿಯನ್ನು ಮತ್ತೆ ಮೂರು ತಿಂಗಳು ವಿಸ್ತರಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ರಾಜ್ಯದಲ್ಲಿ ಈವರೆಗೆ ಕೇವಲ 9.16% ವಾಹನಗಳು ಹೆಚ್ಎಸ್ಆರ್‌ಪಿ ಪ್ಲೇಟುಗಳನ್ನು ಹೊಂದಿದ್ದು ರಾಜ್ಯದಾದ್ಯಂತ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ಅಳವಡಿಕೆಯಲ್ಲಿನ ವಿಳಂಬವನ್ನು ನಿವಾರಿಸಲು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಹೆಚ್ಚುವರಿಯಾಗಿ ಮತ್ತೆ ಮೂರು ತಿಂಗಳ ಅವಧಿ ವಿಸ್ತರಣೆ ಘೋಷಿಸಿದ್ದಾರೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಆದೇಶದಂತೆ 2019ರ ಏಪ್ರಿಲ್‌ಗಿಂತ ಮೊದಲು ನೋಂದಣಿಯಾದ ವಾಹನಗಳಿಗೆ ಸುರಕ್ಷತಾ ನೋಂದಣಿ ಫಲಕ ಅಳವಡಿಸಲಾಗುತ್ತಿದೆ. ವಾಹನಗಳನ್ನು ಬಳಸಿಕೊಂಡು ಎಸಗುವ ಅಪರಾಧಗಳನ್ನು ತಡೆಯಲು, ವಾಹನಗಳನ್ನು ಖಚಿತವಾಗಿ ಗುರುತಿಸಲು ಈ ಫಲಕಗಳು ಸಹಕಾರಿಯಾಗಿವೆ ಎಂದರು.
ಇದಕ್ಕೂ ಮುನ್ನ ನವೆಂಬರ್ 17ರೊಳಗೆ ಹೊಸ ಎಚ್ ಎಸ್ ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ಗಡುವು ನೀಡಲಾಗಿತ್ತು. ಆದರೆ ನಂತರ ಫೆಬ್ರವರಿ 17ವರೆಗೂ ಗುಡುವು ವಿಸ್ತರಿಸಲಾಗಿತ್ತು. ಸರ್ವರ್ ನಿಧಾನಗತಿ ಮತ್ತು ಇತರ ತಾಂತ್ರಿಕ ಸಮಸ್ಯೆಗಳಿಂದ ಎಚ್ಎಸ್ಆರ್‌ಪಿ ಬುಕ್ ಮಾಡುವಲ್ಲಿ ವಾಹನ ಸವಾರರು ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಇದರಿಂದ ಪ್ರಕ್ರಿಯೆ ವಿಳಂಬವಾಗಿದ್ದರಿಂದ ಇದೀಗ ಮತ್ತೊಮ್ಮೆ ಗಡುವು ವಿಸ್ತರಿಸಲಾಗಿದೆ.
Comments