ಡೂಡಲ್ ಮೂಲಕ 25ನೇ ಜನ್ಮದಿನ ಆಚರಿಸಿಕೊಂಡ ಗೂಗಲ್
- vishwa patha
- Sep 27, 2023
- 2 min read

ಯಾವುದಾದರು ವಿಷಯದ ಬಗ್ಗೆ ಅರ್ಥವಾಗಿಲ್ಲ, ಅದರ ಬಗ್ಗೆ ಮಾಹಿತಿ ಬೇಕು ಅಂದರೆ ನಮಗೆಲ್ಲಾ ಮೊದಲು ನೆನಪಾಗುವುದು ಗೂಗಲ್. ಹೌದು ಗೂಗಲ್ ಅದೆಷ್ಟು ನಮ್ಮ ಜೀವನದಲ್ಲಿ ಅವಶ್ಯಕವಾಗಿದೆ ಅಂದರೆ ಸಣ್ಣ ಪುಟ್ಟ ಮಾಹಿತಿಗಳಿಗೂ ಗೂಗಲ್ ಇದೆ ಅನ್ನುವಷ್ಟು. ಗೂಗಲ್ ಇದ್ದು ಬಿಟ್ಟರೆ ಪ್ರಪಂಚದಲ್ಲಿನ ಎಲ್ಲಾ ಮಾಹಿತಿಯನ್ನು ಜೊತೆಗೆ ಇಟ್ಟುಕೊಂಡಷ್ಟು ಆತ್ಮವಿಶ್ವಾಸ. ಹೀಗೆ ನಮ್ಮೆಲ್ಲರಿಗೂ ಸುಲಭವಾಗಿ ಮಾಹಿತಿ ಪಡೆಯಲು ಸಹಾಯಕವಾಗಿರುವ ಅಂತರ್ಜಾಲ ಜಗತ್ತಿನಲ್ಲಿ ಹೆಚ್ಚು ಬಳಕೆಯಲ್ಲಿರುವ ಸರ್ಚ್ ಎಂಜಿನ್ ಗೂಗಲ್‌ಗೆ ಇಂದು 25ನೇ ಜನ್ಮದಿನ. ಇದಕ್ಕಾಗಿ ಗೂಗಲ್ ವಿಭಿನ್ನ ಡೂಡಲ್ ಸಿದ್ಧಪಡಿಸಿ ತನ್ನ ಸರ್ಚ್ ಎಂಜಿನ್‌ನಲ್ಲಿ ಪ್ರಕಟಿಸಿದೆ.
ಆಲ್ಪಬೆಟ್ ಇಂಕ್ ಕಂಪನಿಯು ಈ ವಿಶೇಷ ಸಂದರ್ಭವನ್ನು ಹಂಚಿಕೊಂಡಿದ್ದು, ಕಳೆದ 27 ವಸಂತಗಳಲ್ಲಿ ಗೂಗಲ್ ಬೆಳೆದುಬಂದ ಹಾದಿಯನ್ನು ಮೆಲುಕು ಹಾಕುವ ಪ್ರಯತ್ನ ಮಾಡಿದೆ. 1998ರಿಂದ 2023ರವರೆಗೆ ಗೂಗಲ್‌ನ ಲೊಗೊ ಮತ್ತು ಕಾಲಕಾಲಕ್ಕೆ ಅದರ ವಿನ್ಯಾಸಗಳಲ್ಲಾದ ಬದಲಾವಣೆಗಳನ್ನು ಡೂಡಲ್ ಮೂಲಕ ತನ್ನ ಬ್ಲಾಗ್‌ನಲ್ಲಿ ಗೂಗಲ್ ಹಂಚಿಕೊಂಡಿದೆ.
ಅಮೆರಿಕದ ಪ್ರತಿಷ್ಠಿತ ಸ್ಟಾನ್‌ಫೋರ್ಡ್ ಯೂನಿವರ್ಸಿಟಿಯ ವಿದ್ಯಾರ್ಥಿಗಳಾಗಿದ್ದ ಲ್ಯಾರಿ ಪೇಜ್ ಹಾಗೂ ಸೆರ್ಗೆ ಬ್ರಿನ್ ಸೆಪ್ಟೆಂಬರ್ 27, 1998 ರಂದು ಗೂಗಲ್ನ್ನು ಹುಟ್ಟು ಹಾಕಿದರು. ಇಂಟರ್ನೆಟ್ ಮಾಹಿತಿಯನ್ನು ಸುಲಭವಾಗಿ ಹಂಚಿಕೊಳ್ಳುವ ಹಂಬಲದೊಂದಿಗೆ ಗೂಗಲ್ ಜನ್ಮ ತಾಳಿತು. ಇಬರಿಬ್ಬರೂ ಒಂದು ಸರ್ಚ್ ಎಂಜಿನ್ ಅಭಿವೃದ್ಧಿಪಡಿಸುವ ಅಲೋಚನೆಯನ್ನಿಟ್ಟುಕೊಂಡು ಕೆಲಸ ಆರಂಭಿಸಿ, ಅದರಲ್ಲಿ ಯಶಸ್ವಿಯಾದರು. ಕ್ಯಾಲಿಫೋರ್ನಿಯಾದಲ್ಲಿ 1998ರಂದು ಗೂಗಲ್ ನ್ನು ಅಧಿಕೃತವಾಗಿ ಆರಂಭಿಸಿದರು.
ಅಲ್ಲಿಂದ ಗೂಗಲ್ ಕೇವಲ ಸರ್ಚ್ ಎಂಜಿನ್ ಆಗಿಯಷ್ಟೇ ಉಳಿಯದೇ, ಇಮೇಲ್, ಯುಟ್ಯೂಬ್‌ನಿಂದ ಹಿಡಿದು ಸದ್ಯ ಕೃತಕ ಬುದ್ಧಿಮತ್ತೆಯ ಚಾಟ್‌ಬಾಟ್‌ವರೆಗೂ ಬೆಳೆದು ನಿಂತಿದೆ. ಆ್ಯಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ನಲ್ಲಿ ಜಗತ್ತಿನಲ್ಲೇ ಅತಿ ಹೆಚ್ಚು ಮೊಬೈಲ್‌ಗಳಲ್ಲಿ ಬಳಕೆಯಲ್ಲಿ ಇರುವುದು ಇದೆ ಗೂಗಲ್. ಹಾರ್ಡ್‌ವೇರ್‌ನಲ್ಲೂ ಕೈಯಾಡಿಸಿರುವ ಗೂಗಲ್ ಪಿಕ್ಸೆಲ್ ಮೂಲಕ ಮೊಬೈಲ್ ಕ್ಷೇತ್ರದಲ್ಲೂ ಸದ್ದು ಮಾಡುತ್ತಿದೆ.
'ಗೂಗಲ್' ಎಂಬ ಹೆಸರೇ ಅಗಾಧ. ಜಗತ್ತಿನ ಬಹುತೇಕ ಎಲ್ಲಾ ಮಾಹಿತಿಯನ್ನು ತನ್ನ ಒಡಲಲ್ಲಿ ತುಂಬಿಕೊಂಡಿರುವ ಈ ಟೆಕ್ ದಿಗ್ಗಜ ಈಗ ಆಂಡ್ರಾಯ್ಡ್, ಯೂಟ್ಯೂಬ್, ಡ್ರೈವ್, ಜಿ-ಮೇಲ್ ಹೀಗೆ ಹಲವು ಸೇವೆಗಳನ್ನು ನೀಡುವ ಒಂದು ಅಸಾಧಾರಣ ಸಂಸ್ಥೆ. ಕೇವಲ 1 ಮಿಲಿಯನ್ ಡಾಲರಿಗೆ ಮಾರಾಟಕ್ಕಿದ್ದ ಗೂಗಲ್ ಇಂದು ಸಾವಿರ ಬಿಲಿಯನ್ ಡಾಲರ್ ಬೆಲೆ ಬಾಳುವ ಕಂಪನಿಯಾಗಿ ರೂಪುಗೊಂಡದ್ದು ಸೋಜಿಗವೇ ಸರಿ.
ವಿಶ್ವದಾದ್ಯಂತ 1.8 ಶತಕೋಟಿ ಜಿ-ಮೇಲ್ ಬಳಕೆದಾರರನ್ನು ಹೊಂದಿರುವ ಗೂಗಲ್, ಜಗತ್ತಿನ ಒಟ್ಟು ಜನಸಂಖ್ಯೆಯ ಶೇ 22ರಷ್ಟು ಪಾಲನ್ನು ತನ್ನದಾಗಿಸಿಕೊಂಡಿದೆ. ಭಾರತದ ಅಂತರ್ಜಾಲ ಬಳಕೆದಾರರಲ್ಲಿ ಶೇ 80ರಷ್ಟು ಜನ ಗೂಗಲ್ ಬಳಸುತ್ತಿದ್ದಾರೆ. ಜಗತ್ತಿನ 150ಕ್ಕೂ ಹೆಚ್ಚು ಭಾಷೆಗಳಲ್ಲಿ ನಿತ್ಯ ಹಲವು ವಿಷಯಗಳ ಕುರಿತ ಹುಡುಕಾಟ ಗೂಗಲ್ ಮೂಲಕವೇ ನಡೆಯುತ್ತಿದೆ. ಜಗತ್ತಿನ 20 ಕಡೆಗಳಲ್ಲಿ ಗೂಗಲ್ ತನ್ನ ಮಾಹಿತಿ ಕೇಂದ್ರ ಹೊಂದಿದೆ. ಬೃಹತ್ ಸರ್ವರ್‌ಗಳನ್ನು ಕಂಪನಿ ಹೊಂದಿದ್ದು, ಜಾಗತಿಕ ಮಟ್ಟದಲ್ಲಿ 1.78 ಲಕ್ಷ ನೌಕರರನ್ನು ಹೊಂದಿದೆ.
ಗೂಗಲ್ ಕುರಿತ ಒಂದಷ್ಟು ಕುತೂಹಲಕರಿ ವಿಷಯಗಳು:
ಗೂಗಲ್ ಸರ್ಚ್ ಎಂಜಿನ್ ನ ಮೊದಲ ಹೆಸರು ಬ್ಯಾಕ್‌ರಬ್
ಸರ್ಗಿ ಹಾಗೂ ಲ್ಯಾರಿ ನಡುವಿನ ಪ್ರತಿಯೊಂದು ಆಲೋಚನೆಗಳೂ ಭಿನ್ನವಾಗಿದ್ದವು. ಹೀಗಾಗಿ ಒಬ್ಬರ ಆಲೋಚನೆಗೆ ಮತ್ತೊಬ್ಬರ ಸಹಮತ ಇರುತ್ತಿರಲಿಲ್ಲ.
ಗೂಗಲ್ ಎಂದರೆ ಒಂದು ವಿಷಯ ಅಥವಾ ಒಬ್ಬ ವ್ಯಕ್ತಿಯ ಕುರಿತ ಮಾಹಿತಿಯನ್ನು ವರ್ಲ್ಡ್ ವೈಡ್ ವೆಬ್‌ನಲ್ಲಿ ಪಡೆಯವುದಾಗಿದೆ.
ಗೂಗಲ್.ಕಾಂ 1997ರ ಸೆ. 15ರಂದು ನೋಂದಣಿಯಾಯಿತು.
1998ರಲ್ಲಿ ಮೊದಲ ಭಾರಿಗೆ ಗೂಗಲ್ ತನ್ನ ಜಾಲತಾಣವನ್ನು ಲೋಕಾರ್ಪಣೆಗೊಳಿಸಿತು
ಕ್ಯಾಲಿಫೋರ್ನಿಯಾದ ಮೆನ್ಲೊ ಪಾರ್ಕ್‌ನಲ್ಲಿ ಗೂಗಲ್ ಮೊದಲ ಕಚೇರಿ ಆರಂಭ.
ಗೂಗಲ್ ನೌಕರರಾದ ಸುಸಾನ್ ಅವರು ತನ್ನ ಸ್ವಂತ ಜಾಗವನ್ನು ಕಚೇರಿಗೆ ಬಿಟ್ಟುಕೊಟ್ಟಿದ್ದರು.
ಯೋಕ್ಷಾ ಎಂಬ ಕಂಪನಿಯ ಮೊದಲ ನಾಯಿಯನ್ನು ಗೂಗಲ್ ಪರಿಚಯಿಸಿತು.
2006ರಲ್ಲಿ ಗೂಗಲ್ ಪದವು ಕ್ರಿಯಾಪದವಾಗಿ ಪದಕೋಶ ಸೇರಿತು.
ಗೂಗಲ್ ತನ್ನ ಮೊದಲ ಟ್ವೀಟ್ ಅನ್ನು 2009ರ ಫೆ. 25ರಂದು ಟ್ವೀಟ್ ಮಾಡಿತು.
ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ವ್ಯಾಸಂಗಕ್ಕಾಗಿ ವಿದ್ಯಾರ್ಥಿಗಳಿಗೆ ಗೂಗಲ್ ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ.
ಗೂಗಲ್‌ನ ಹುಟ್ಟುಹಬ್ಬವನ್ನು ಈ ಹಿಂದೆ ಬೇರೆ ಬೇರೆ ದಿನಾಂಕಗಳಲ್ಲಿ ಆಚರಿಸಲಾಗಿದೆ. ಮೊದಲಿಗೆ ಸೆಪ್ಟೆಂಬರ್ 7 ರಂದು, ನಂತರ 8 ರಂದು ಗೂಗಲ್ ಹುಟ್ಟುಹಬ್ಬವನ್ನು ಆಚರಿಸಲಾಯಿತು ಇದಾದ ಬಳಿಕ ಸೆಪ್ಟೆಂಬರ್ 26 ರಂದು ಆಚರಿಸಲಾಯಿತು, ನಂತರ ಕಂಪನಿಯು ಸೆಪ್ಟೆಂಬರ್ 27 ರಂದು ಅಧಿಕೃತವಾಗಿ ಗೂಗಲ್ ಹುಟ್ಟುಹಬ್ಬವನ್ನು ಆಚರಿಸುವುದಾಗಿ ಘೋಷಿಸಿ, ಇಂದು ತನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದೆ ಗೂಗಲ್.
Comments