ನಾಡಿನಾದ್ಯಂತ ಗೌರಿ, ಗಣೇಶ ಹಬ್ಬದ ಸಂಭ್ರಮ, ಸಡಗರಗಳು ಮನೆಮಾಡಿದೆ. ಮನೆ, ಮನೆಗಳಲ್ಲಿ ರಂಗೋಲಿ ಬಿಡಿಸಿ, ತಳಿರು ತೋರಣ ಕಟ್ಟಿದ್ದಾರೆ. ಗೌರಿ ಮೂರ್ತಿಗೆ ಹೂವಿನ ಅಲಂಕಾರ ಮಾಡಿ ಬಾಗಿನ ಸಿದ್ದಪಡಿಸಿ, ಭಕ್ತಿಯಿಂದ ಪೂಜೆ ಸಲ್ಲಿಸಿದರು.
ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಮುತ್ತೈದೆಯರು ದೇವರಿಗೆ ಬಾಗೀನ ಅರ್ಪಿಸಿದರು.ಗೌರಿ ಗಣೇಶ್ ಹಬ್ಬಕ್ಕೆ ಹೂವು, ಹಣ್ಣು ಖರೀದಿಗೆ ತೆರಳಿದ ಗ್ರಾಹಕರಿಗೆ ಹಬ್ಬದ ಬಿಸಿ ತಟ್ಟಿದೆ. ಹೂವು, ಹಣ್ಣುಗಳ ಬೆಲೆ ಸಾಮಾನ್ಯ ದಿನಗಳಿಗಿಂತ ಹೆಚ್ಚಾಗಿದೆ.
ಗಣಪತಿ ಹಬ್ಬಕ್ಕೂ ಸಹ ಸಿದ್ದತೆಗಳು ಜೋರಾಗಿ ನಡೆದಿದ್ದು, ಈಗಾಗಲೇ ಗಣೇಶ ಮೂರ್ತಿ ಪ್ರತಿಷ್ಟಾಪನೆಗೆ ಸಿದ್ದತೆ ಸಾಗಿದೆ. ಯುವಕರು ತಮ್ಮ ಏರಿಯಾದಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಲು ಪೆಂಡಾಲ್ ನಿರ್ಮಾಣದಲ್ಲಿ ತೊಡಗಿದ್ದಾರೆ.
ಗಣಪತಿ ಆಕರ್ಷಕ ಮಂಟಪಗಳು ಕಣ್ಮನ ಸೆಳೆಯುವಂತಿದೆ. ಮಾರುಕಟ್ಟೆಗೆ ಹತ್ತು ಹಲವು ವಿವಿಧ ಭಂಗಿಯ ಗಣಪತಿ ಮೂರ್ತಿಗಳು ಬಂದಿವೆ. ಕೆಲವು ಯುವಕರು ಈ ಮೊದಲೇ ಗಣಪತಿ ಮೂರ್ತಿಗೆ ಮುಂಗಡ ನೀಡಿ ತಮಗಿಷ್ಟವಾದ ಗಣಪತಿ ಮೂರ್ತಿಯನ್ನು ಕಾಯ್ದಿರಿಸಿದ್ದಾರೆ.
ಈಗಾಗಲೇ ಗಣಪತಿ ಮಂಟಪಗಳ ಸಿದ್ದವಾಗಿದ್ದು, ಗಣಪತಿಯ ಸ್ವಾಗತಕ್ಕೆ ಯುವಕರು ಸಜ್ಜಾಗಿದ್ದಾರೆ. ಇನ್ನು ಮನೆಗಳಲ್ಲಿಯೂ ಗಣಪತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ಚಿಕ್ಕ ಗಾತ್ರದ ಗಣಪತಿ ಮೂರ್ತಿಗಳು ಬಂದಿವೆ. ಹಬ್ಬದ ಹಿನ್ನೆಲೆಯಲ್ಲಿ ಇಂದೂ ಕೂಡ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ಹೂ, ಹಣ್ಣು, ಬಾಳೆದಿಂಡು ಇನ್ನಿತರ ಪೂಜಾ ಸಾಮಾಗ್ರಿಗಳ ಖರೀದಿ ಭರಾಟೆ ಬಲು ಜೋರಾಗಿಯೇ ನಡೆದಿದೆ.
ಗೌರಿ, ಗಣೇಶ ಹಬ್ಬಕ್ಕೆ ತಮ್ಮ ಹುಟ್ಟಿದೂರಿಗೆ ತೆರಳುವ ಮಂದಿಗೆ ಕೂಡ ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣದ ದರ ಏರಿಕೆಯ ಬಿಸಿ ತಟ್ಟಿದೆ. ಎಂದಿನ ದರಕ್ಕಿಂತ ಪ್ರಯಾಣ ದರವನ್ನು ಏರಿಸಿರುವುದು ಅವರನ್ನು ಹುಬ್ಬೇರಿಸುವಂತೆ ಮಾಡಿದೆ.
Comments