top of page
Writer's picturevishwa patha

ಧರ್ಮಸ್ಥಳದ ನೇರ್ತನೆಯಲ್ಲಿ ಆತಂಕ ಸೃಷ್ಟಿಸಿದ ಕಾಡಾನೆಗಳ ಹಿಂಡು



ಬೆಳ್ತಂಗಡಿ: ಗುರುವಾರ ಹಗಲು ಹೊತ್ತಿನಲ್ಲಿಯೇ ಕಾಡಾನೆಗಳ ಹಿಂಡು ಕಾಣಿಸಿಕೊಂಡಿದ್ದರಿಂದಾಗಿ ಧರ್ಮಸ್ಥಳದ ನೇರ್ತನೆ ಪ್ರದೇಶ ಸುತ್ತಮುತ್ತಲಿನ ಜನರರಲ್ಲಿ ಆತಂಕ ಮನೆ ಮಾಡಿದೆ. ಈ ಆನೆಗಳ ಗುಂಪಿನಲ್ಲಿ ಒಂದು ಮರಿಯಾನೆ ಹಾಗೂ ಎರಡು ದೊಡ್ಡ ಆನೆಗಳು ಇದ್ದು ನೇರ್ತನೆ ಗ್ರಾಮದ ಕೃಷಿ ಭೂಮಿಗೆ ಲಗ್ಗೆ ಇಟ್ಟಿವೆ. ಸಮೀಪದ ಅರಣ್ಯದಿಂದ ಬಂದಿರುವ ಆನೆಗಳು ಜನವಸತಿ ಪ್ರದೇಶದಲ್ಲಿ ಸಂಚರಿಸುತ್ತಿವೆ. ಸದ್ಯಕ್ಕೆ ಪೊಸಳಿಕೆ ಸಮೀಪ ಖಾಸಗಿ ಜಾಗದಲ್ಲಿ ಸುತ್ತಲಿನ ಪರಿಸರದಲ್ಲಿ ಆನೆಗಳು ತಿರುಗಾಟ ನಡಸುತ್ತಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಕಳೆದ ಎರಡು ಮೂರು ದಿನಗಳಿಂದ ಕಾಡಾನೆಗಳು ಈ ಪ್ರದೇಶದಲ್ಲಿ ಕಾಣಿಸಿಕೊಂಡು ಕೃಷಿಗೆ ವ್ಯಾಪಕವಾದ ಹಾನಿಯುಂಟು ಮಾಡುತ್ತಿದ್ದವು. ಕಾಡಾನೆಗಳನ್ನು ಓಡಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಹಾಗೂ ಸ್ಥಳೀಯರು ನಡೆಸಿರುವ ಎಲ್ಲ ಪ್ರಯತ್ನಗಳೂ ವಿಫಲವಾಗಿದ್ದು ಇದೀಗ ಹಗಲು ವೇಳೆಯಲ್ಲಿಯೇ ಆನೆಗಳು ತೋಟಗಳಿಗೆ ನುಗ್ಗಲು ಆರಂಭಿಸಿದೆ. ಧರ್ಮಸ್ಥಳದ ಬಸ್ ನಿಲ್ದಾಣದ ಸಮೀಪದ ವರೆಗೂ ಕಾಡಾನೆಗಳು ಬಂದಿದ್ದವು ಎಂದು ಸ್ಥಳೀಯರು ಮಾಹಿತಿ ನೀಡುತ್ತಿದ್ದು, ಬುಧವಾರ ತಡ ರಾತ್ರಿಯೂ ಅರಣ್ಯ ಇಲಾಖೆಯ ಅಧಿಕಾರಿಗಳು ಆನೆಗಳನ್ನು ಓಡಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದರು ಆದರೆ ಅದು ಯಾವುದೂ ಪ್ರಯೋಜನ ನೀಡಿಲ್ಲ ಕಾಡಾನೆಗಳನ್ನು ಅರಣ್ಯಕ್ಕೆ ಓಡಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಕೃಷಿ ನಾಶಕ್ಕೆ ಪರಿಹಾರ ನೀಡಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ.

Comments


bottom of page