ದೀಪಾವಳಿ
- vishwa patha
- Sep 27, 2023
- 1 min read

ಇದೊಂದು ದಿನ ಚಂದ್ರ
ನೀ ಹೀಗೆ ಇರು.
ಸೂರ್ಯ ನೀ ನಾಳೆ
ಬರದಿರು.
ನಾಳೆ ನನ್ನ ಕಂದನಿಗೆ
ದೀಪಾವಳಿಯ ಸಡಗರ.
ಹೊಸ ಬಟ್ಟೆ, ಪಟಾಕಿ
ನೋಡುವ ಆತುರ.
ಇದೊಂದು ದಿನ ಚಂದ್ರ
ನೀ ಹೀಗೆ ಇರು.
ನಾಳೆ ಸೂರ್ಯ ನೀ
ಬರದಿರು.
ನನ್ನ ದಿನದ ದೀಪಾವಳಿ,
ಬಡತನದ ಬಳುವಳಿ, ಹಸಿವಿನ ಹಾವಳಿ.
ದೀಪದ ಎಣ್ಣೆಗೆ ಗಾಣಿಗ ನಾನು,
ಬೆವರು, ರಕ್ತದ ಮಾಲಿಕ ನಾನು.
ಹೇಳಲಿ ಹೇಗೆ ನಿರ್ಗತಿಕ ನಾನು.
ಸಂತಸ, ಸಂಭ್ರಮದಿ ನಿದ್ದೆಯಿಲ್ಲ
ನನ್ನ ಕಂದನಿಗೆ.
ಹಸಿವು, ಹತಾಶೆ ನಿದ್ರಿಸಲು ಬಿಡುತ್ತಿಲ್ಲ
ನನಗೆ.
ಬೆಳಗಾದರೆ ದಿನದ ದೀಪಾವಳಿಯ
ಪರಿಚಯ ಹೇಗೆ ಮಾಡಿಸಲಿ
ಆ ಮುಗ್ದ ನಗುವಿಗೆ...
ಇದೊಂದು ದಿನ ಚಂದ್ರ
ನೀ ಹೀಗೆ ಇರು.
ಸೂರ್ಯ ನೀ ನಾಳೆ
ಬರದಿರು.
-ಅರುಣ್ ಕುಮಾರ್ ಕೆ ಪಿ
ಉಪನ್ಯಾಸಕರು
ಡಿ ವಿ ಎಸ್ ಪದವಿ ಪೂರ್ವ ಕಾಲೇಜು ಶಿವಮೊಗ್ಗ
ಬದುಕಿನ ಸಂಕೀರ್ಣತೆಯೊಳಗೆ ನಲಗುವ ಕಾವ್ಯ ತನ್ನದೇ ಭಾವನೆಗಳಲ್ಲಿ ಬದುಕು ನಲಿಸುವ ಕಷ್ಟಗಳಲ್ಲಿ ಮಗುವ ನಲಿಸುವ ಆತ್ಮೀಯತೆಯಲಿ ಚಿಂತೆ ಮರೆಸುವ ಕಾವ್ಯ... ಒಳ್ಳೆದಾಗಲಿ ಗೆಳೆಯ... ಇನ್ನಷ್ಟು ಕಾವ್ಯ ಲಹರಿ ಸೃಜಿಸು
👌