ಬೆತ್ತಲ ತೀರ್ಪು....
- vishwa patha
- Aug 14, 2023
- 1 min read

ಶತಮಾನದ ಕ್ಯಾಲೆಂಡರಿನಲ್ಲಿ
ಬರೆದಂತೆ, ಬಟ್ಟೆ ಉಟ್ಟು ತೊಟ್ಟು
ನಿನ್ನೆಗಳ ನೂಕಿದ್ದು ಸಾಕು.
ಹುಟ್ಟುಡುಗೆಯ ನಾಳೆಗಳಿಗೆ
ಸ್ತ್ರೀಕುಲವೇ ಸಿದ್ದವಾದರೆ,
ನಿನ್ನ ದರ್ಪ...ಗುಜರಿಯ ಸರಕು
ಹೆಚ್ಚೆಂದರೆ.... ಪ್ರಾಣಿದಯೆಯೂ
ಇಲ್ಲದ ಗುಂಡಿಗೆಗೆ, ದೇಹ
ಮಾತ್ರ ದಕ್ಕೀತು ಅಷ್ಟೇ
ಯಾರೊ... ಹರಿದು ಹಂಚುವ
ಮುನ್ನ, ಹೆತ್ತವ್ವಳೆ ಗರ್ಭ ಕಳಚಲಿ
ಬಿಡು , ಲೋಕ ಹೆಣ್ಣಾಗುವವರೆಗೂ.
ಅವ್ವಾ.... ಗಂಡುಕುಲವನ್ನಷ್ಟೇ
ಹೆತ್ತು ಮರೆಯಾಗಿ, ಆಗಸದಿಂದ
ಕದ್ದುನೋಡು, ಈ...ಕೇಡುಗಾಲವನ್ನ.
ಕೊಂಡುಕೊಳ್ಳುವ ಖರ್ಚಿಲ್ಲ,
ಮಾರಿಕೊಳ್ಳುವ ದರ್ದಿಲ್ಲ,
ಕಳಚುವ ಕೈಗಳಿಗೆ ವಿರಾಮ.
ಹೆಣ್ಣು ಕುಲವೇ ದಿಗಂಬರ ಉಟ್ಟು ,
ಜಗದೆತ್ತರ ಗೋಳಗುಮ್ಮಟಗಳಾದರೆ
ಉಕ್ಕೇರುವ ಸೊಕ್ಕಿಗೆ ಸಾವಾದೀತು.
ಹೀಗೊಂದು ಬೆತ್ತಲ ತೀರ್ಪು
ಇದೀಗ ನಮ್ಮೆದೆಯಿಂದಲೇ
ಹೊರಟರೆ....
ರಾಧ ಎಚ್.ಎಂ.
ಸಂಶೋಧನಾರ್ಥಿ ಕನ್ನಡ ಭಾರತಿ
ಜ್ಞಾನ ಸಹ್ಯಾದ್ರಿ,ಕುವೆಂಪು ವಿ.ವಿ, ಶಂಕರಘಟ್ಟ
ಹೆಣ್ಣು ಕುಲವೇ ದಿಗಂಬರ ಉಟ್ಟು ,
ಜಗದೆತ್ತರ ಗೋಳಗುಮ್ಮಟಗಳಾದರೆ
ಉಕ್ಕೇರುವ ಸೊಕ್ಕಿಗೆ ಸಾವಾದೀತು.
ಹೆಣ್ಣು ಕುಲವೇ ದಿಗಂಬರ ಉಟ್ಟು , ಜಗದೆತ್ತರ ಗೋಳಗುಮ್ಮಟಗಳಾದರೆ ಉಕ್ಕೇರುವ ಸೊಕ್ಕಿಗೆ ಸಾವಾದೀತು. ....ರಾಧ ಅವರ ಕವಿತೆಯ ಈ ಸಾಲುಗಳು ದೇಶದ ವರ್ತಮಾನಕ್ಕೆ ಮುಖಾಮುಖಿ ಆಗಿವೆ. ಕಾವ್ಯ ಪುರುಷಾಹಂಕಾರದ ವಿರುದ್ಧ ಪ್ರತಿಭಟನೆ ಖಡ್ಗವಾಗುವುದು ಹೀಗೆ .
ಅದ್ಭುತ ಪ್ರತಿಮೆಗಳೊಡನೆ ಸಾಗುವ ಈ ಕವಿತೆ ಮುಷ್ಟಿಯಲ್ಲಿ ಸಮಷ್ಟಿ ನೋವು ತೆರೆದಿಡುತ್ತದೆ. ಕನ್ನಡದಲ್ಲಿ ಬಂದ ಉತ್ತಮ ಕವಿತೆಗಳ ಸಾಲಲ್ಲಿ ಈ ಕವಿತೆ ನಿಲ್ಲುತ್ತದೆ.
- ನಾಗರಾಜ್ ಹರಪನಹಳ್ಳಿ